ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ

14ark1
Published on

ಅರಕಲಗೂಡು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿಗೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದವರ ಆರೋಗ್ಯ ತಪಾಸಣೆ ನಡೆಸಿ, ಕ್ವಾರಂಟೈನ್‌ಗೆ ಒಳಪಡಿಸಿ ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕರೊನಾ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಹೊರಗಿನಿಂದ ಬರುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಬೇಕು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನೀರುಗಂಟಿಗಳು ಹೆಚ್ಚಿನ ಜಾಗೃತಿ ವಹಿಸಿ ಆರೋಗ್ಯ ಇಲಾಖೆ ಅಥವಾ ತಾಲೂಕು ಮಟ್ಟದ ಆಯಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ ತರುವಾಯ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಆರಂಭಿಸಿದ್ದು ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣವಾಗಿದೆ. ಮೇ 17ರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಕ್ರಮ ಕೈಗೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಲ್ಲಿಯವರೆಗೆ ಜನಜಂಗುಳಿ ಏರ್ಪಡದಂತೆ ಜಾಗೃತಿ ವಹಿಸಬೇಕು. ಮುಖ್ಯವಾಗಿ ಸ್ವಚ್ಛತೆಗೆ ಆದ್ಯತೆ ನೀಡಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು. ಇಲ್ಲವಾದರೆ ಯೋಜನೆಯ ಹಣ ವಾಪಸಾಗಲಿದೆ ಎಂದು ಎಚ್ಚರಿಸಿದರು.

ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ, ಬರಗೂರು ವಸತಿ ಶಾಲೆಯಲ್ಲಿ ಹೊರಗಿನಿಂದ ಬಂದ 18 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ, ತಾಪಂ ಇಒ ಎನ್. ರವಿಕುಮಾರ್, ಪಪಂ ಮುಖ್ಯಾಧಿಕಾರಿ ಸುರೇಶ್‌ಬಾಬು, ಸದಸ್ಯರು ಹಾಜರಿದ್ದರು.

ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದ ಕಾರಣ ಕೆಲವರು ಅದನ್ನೇ ದಂಧೆ ಮಾಡಿಕೊಂಡಿದ್ದರು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಒಳ್ಳೆಯದೆಂದು ನಾನೇ ಹೇಳಿದ್ದೆ. ಆದರೆ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡದೆ, ಸಂಜೆ 7 ಗಂಟೆವರೆಗೂ ಸಮಯ ನಿಗದಿಪಡಿಸಿದ ಪರಿಣಾಮ ಜನಜಂಗುಳಿ ತಡೆಗಟ್ಟಲು ಮತ್ತು ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗಿದೆ.
> ಎ.ಟಿ. ರಾಮಸ್ವಾಮಿ ಶಾಸಕ

14ಎಆರ್‌ಕೆ2..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net