

ಮುಂಡರಗಿ: ಪಟ್ಟಣದ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ಹಾಗೂ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸಹ ಅಧ್ಯಕ್ಷತೆಯಲ್ಲಿ ಬುಧವಾರ ತ್ರೈಮಾಸಿಕ ಕೆಡಿಪಿ ಸಭೆ ಜರುಗಿತು.
ಬಿಸಿಎಂ ಇಲಾಖೆ ತಾಲೂಕು ಅಧಿಕಾರಿ ಶಿವಯೋಗಿ ಕಲ್ಮಠ ಅವರು ಶಾಸಕರಿಗೆ ತಿಳಿಸದೆ ಒಂದು ಬಿಸಿಎಂ ವಸತಿ ನಿಲಯ ಉದ್ಘಾಟನೆ ಮಾಡಿದ್ದಾರೆ. ಅವರ ವಿರುದ್ಧ ಪ್ರೋಟೋಕಾಲ್ ನಿಯಮ ಉಲ್ಲಂಘನೆ ಕ್ರಮ ಜರುಗಿಸಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಒತ್ತಾಯಿಸಿದರು.
ತಾಲೂಕಿನ ಮಳೆ ಮಾಪನ ಯಾವ ರೀತಿಯಲ್ಲಿ ಮಾಡಲಾಗುತ್ತದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಅವರನ್ನು ಪ್ರಶ್ನಿಸಿದರು. ಡಂಬಳ ಮತ್ತು ಮುಂಡರಗಿ ಹೋಬಳಿ ವ್ಯಾಪ್ತಿ ಮಳೆ ಮಾಪನ ಮಾಹಿತಿ ಸಿಗುತ್ತದೆ ಎಂದು ಪ್ರಾಣೇಶ ತಿಳಿಸಿದರು. ಬೆಳೆವಿಮೆ ಗ್ರಾ.ಪಂ. ಮಟ್ಟದ ಬೆಳೆಗಳಿಗೆ ಮಾಡುತ್ತೀರಿ, ಹೋಬಳಿ ವಾರು ಮಳೆ ಮಾಪನ ಮಾಡಿದರೆ ಹೇಗೆ? ಪ್ರತಿ ಗ್ರಾ.ಪಂ. ವಾರು ಮಳೆ ಮಾಪನ ಮಾಹಿತಿ ಸಿಗುವಂತಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಸೂಚಿಸಿದರು.
ತಾಲೂಕಿನಲ್ಲಿ ಮಳೆ ಮಾಪನ ಎಲ್ಲಿವೆ? ಅವು ಪ್ರಾರಂಭ ಇವೇಯಾ? ಎಂಬ ಮಾಹಿತಿ ಸಂಗ್ರಹಿಸಿ ತಿಳಿಸಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. ಸಭೆಗೆ ಯಾರು ಬರುವುದಿಲ್ಲ ಅಂತಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಇಒ ವಿಶ್ವನಾಥ ಅವರಿಗೆ ಸೂಚಿಸಿದರು.
ಅತಿಥಿ ಶಿಕ್ಷಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳಿವೆ. ಆ ಬಗ್ಗೆ ಕ್ರಮ ವಹಿಸಬೇಕು. ನುರಿತ ಶಿಕ್ಷಕರನ್ನು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ತರಗತಿ ನಡೆಸುವುದಕ್ಕೆ ನಿಯೋಜಿಸಬೇಕು. ಎಸ್ಸೆಸ್ಸೆಲ್ಸಿ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಗುಣಮಟ್ಟದ ಫಲಿತಾಂಶ ಹೊಂದುವಂತೆ ಮಾಡಬೇಕು ಎಂದು ಬಿಇಒ ಎಚ್.ಎಂ. ಪಢ್ನೇಶಿ ಅವರಿಗೆ ಶಾಸಕರು ಸೂಚಿಸಿದರು. ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದ ಇಬ್ಬರು ಶಾಸಕರು, ಎಚ್ಎಂಪಿವಿಐ ವೈರಸ್ ನಿಯಮಾವಳಿ ನಿರ್ವಹಣೆ, ಬಾಣಂತಿಯರ ಆರೋಗ್ಯ ತಪಾಸಣೆ, ವೈದ್ಯಾಧಿಕಾರಿ ಹುದ್ದೆ ಬಗ್ಗೆ ರ್ಚಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ದೂರು ಬರುತ್ತಿದೆ. ಅಪ್ಲಿಕೇಷನ್ ಹಾಕಿದ್ದರೂ ಅದರಲ್ಲಿ ಅಂಕ ಪಟ್ಟಿ, ಮೊತ್ತೊಂದು ದಾಖಲೆ ಅಪ್ಲೋಡ್ ಆಗಿಲ್ಲ ಅಂತ ತೋರಿಸುತ್ತಿವೆ. ಹೀಗಾದರೆ ಹೇಗೆ? ಆದ್ದರಿಂದ ಹೆಚ್ಚು ಫಲಿತಾಂಶ ಇರುವವರಿಗೆ ಅನ್ಯಾಯವಾಗಬಾರದು ಅಂತವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಡಾ. ಚಂದ್ರು ಸಿಡಿಪಿಒ ಅವರಿಗೆ ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯ ಪ್ರಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ತಾರಾಮಣಿ ಜಿ.ಎಚ್., ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್., ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ತಾ.ಪಂ. ಇಒ ವಿಶ್ವನಾಥ ಹೊಸಮನಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.