

ಬೆಳಗಾವಿ: ಪರಿಶಿಷ್ಟ ಸಮುದಾಯದವರ ಮೇಲಿನ ದೌರ್ಜನ್ಯ ಕುರಿತು ದೂರುಗಳು ದಾಖಲಾದಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾಮಟ್ಟದ ಜಾಗೃತಿ ಹಾಗೂ ಸಮಿತಿ ಸಭೆಯ ಅಧ್ಯತೆ ವಹಿಸಿ ಮಾತನಾಡಿ, ಸರ್ಕಾರದಿಂದ ವಿತರಿಸುವ ಸಾಲಗಳನ್ನು ನೇರವಾಗಿ ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಗೆ ನೀಡಬೇಕು ಎಂದರು.
ಜಿಲ್ಲಾಸ್ಪತ್ರೆಗೆ ಬರುವ ಪರಿಶಿಷ್ಟ ಸಮುದಾಯದ ರೋಗಿಗಳಿಗೆ ತುರ್ತಾಗಿ ಚಿಕಿತ್ಸೆಗೆ ಕ್ರಮ ವಹಿಸಬೇಕು. ಜಾತಿ ಪ್ರಮಾಣಪತ್ರದ ನೆಪವೊಡ್ಡಿ ಚಿಕಿತ್ಸೆ ನಿರಾಕರಿಸಬಾರದು. ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಪೌರ ಕಾರ್ಮಿಕರಿಗೆ ಶ್ರೀ ರಣಾ ಸಾಮಗ್ರಿ ವಿತರಿಸಬೇಕು. ನ್ಯಾಯಾಲಯಗಳಲ್ಲಿ ಬಾಕಿ ಇರುವ ದೌರ್ಜನ್ಯ ಪ್ರಕರಣಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ಇತ್ಯರ್ಥಪಡಿಸಬೇಕು. ಲೋನ್ ನೀಡಲು ವಿನಾಕಾರಣ ಅರ್ಜಿ ತಿರಸ್ಕರಿಸದಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾಬ್ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸುಗಮ ಸಂಚಾರ ವ್ಯವಸ್ಥೆ ಹಾಗೂ ಸರಗಳ್ಳತನ ಕುರಿತು ಹೆಚ್ಚಿನ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಮಿತಿ ಸದಸ್ಯ ಕರೆಪ್ಪ ಗುಡೇನ್ನವರ ಮಾತನಾಡಿ, ಪರಿಶಿಷ್ಟರಿಗೆ ಕೆಲ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಆಸ್ಪದೆ ನೀಡುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ತಾರತಮ್ಯವಾಗುತ್ತಿದೆ. ಪ್ರತಿ ತಿಂಗಳು ಪೊಲೀಸ್ ಠಾಣೆಗಳಲ್ಲಿ ಪಜಾ, ಪಪಂ ಸಮುದಾಯದವರೊಂದಿಗೆ ಸಭೆ ಜರುಗಿಸಲು ಮನವಿ ಮಾಡಿದರು.
ಸಮಿತಿ ಸದಸ್ಯ ವಿಜಯ ತಳವಾರ ಮಾತನಾಡಿ, ಆರ್.ಪಿ.ಡಿ. ವೃತ್ತದ ಬಳಿ ವೀರ ಮದಕರಿ ನಾಯಕರ ಪ್ರತಿಮೆ ಸ್ಥಾಪಿಸಲು ಅನುಮತಿ ನೀಡಬೇಕೆಂದು ವಿನಂತಿಸಿದರು.
ಸಮಿತಿ ಸದಸ್ಯರಾದ ಸಿದ್ದರಾಯ ಮೇತ್ರಿ, ಮಲ್ಲೆಶ ಚೌಗಲೆ, ಬಸಪ್ಪ ತಳವಾರ, ಜೀವನ ಮಾಂಜ್ರೇಕರ, ಜಿಪಂ ಸಿಇಒ ರಾಹುಲ್ ಶಿಂಧೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ವಿವಿಧ ಅಧಿಕಾರಿಗಳು ಇದ್ದರು.