ಪ್ರವಾಹ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ; ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ ಸೂಚನೆ

M B PATIL MEETING FLOOD
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳ ಸಭೆ ನಡೆಸಿದರು. ಡಿಸಿ ಡಾ.ಆನಂದ ಕೆ, ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರು ಹಾನಿ ಕುರಿತಂತೆ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆಯಿಂದಾದ ಹಾನಿ ಹಾಗೂ ಅದರ ಪರಿಣಾಮಗಳ ಕುರಿತು ಮಾಹಿತಿ ಪಡೆದುಕೊಂಡರಲ್ಲದೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಾಳಾಗಿರುವ ರಸ್ತೆಗಳ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸಬೇಕು ಎಂದರು.

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆ ನಡೆಸಬೇಕು. ಜಿಪಿಎಸ್ ಫೋಟೋ ಬಳಸಿ ಯಾವುದೇ ರೈತರಿಂದ ದೂರು ಬರದಂತೆ ಎಚ್ಚರಿಕೆ ವಹಿಸಬೇಕು. ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು. ಜಿಲ್ಲಾಧಿಕಾರಿಗಳು ಈ ಕುರಿತು ಮೇಲ್ವಿಚಾರಣೆ ನಡೆಸುವಂತೆ ಸೂಚನೆ ನೀಡಿದರು.

ನಗರದಲ್ಲಿ ಕಟ್ಟೆಚ್ಚರ ವಹಿಸಿ

ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಳೆ ಬಂದ ಸಂದರ್ಭದಲ್ಲಿ ಕಾಮಗಾರಿಗಳನ್ನು ಕೈಗೊಳ್ಳದೇ ಮುಂಚಿತವಾಗಿ ಪ್ರವಾಹಕ್ಕೊಳಗಾಗುವ ಪ್ರದೇಶಗಳನ್ನು ಗುರುತಿಸಿಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಗರದ 11 ಕಿ.ಮೀ. ಕೋಟೆಗೋಡೆ ಕಂದಕ ಸಂಪೂರ್ಣ ಸರ್ವೇ ಮಾಡಿಸಿ ಈಗಾಗಲೇ ಮಾರ್ಕ್ ಮಾಡಿಸಲಾಗಿದೆ. ಮನಗೂಳಿ ಅಗಸಿಯಿಂದ ಸಿಂದಗಿ ರಸ್ತೆಯ ರೈಲ್ವೆ ಸ್ಟೇಶನ್‌ವರೆಗೆ ಕೋಟೆಗೋಡೆ ಕಂದಕ ಹೂಳು ತೆಗೆಯುವುದು ಮತ್ತು ಸಮತಟ್ಟುಗೊಳಿಸಿ ನೀರನ್ನು ಸಂಪೂರ್ಣವಾಗಿ ಹೊರ ಹಾಕಲು ಈಗಾಗಲೇ ಯೋಜನೆ ರೂಪಿಸಿ ಚಾಲನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಕ್ರಮ ವಹಿಸಬೇಕೆಂದರು.

ಪ್ರಮುಖ ನಗರಗಳ ಪ್ರಸ್ತಾಪ

ಕೆಸಿ ನಗರ, ಗಚ್ಚಿನಕಟ್ಟಿ ಕಾಲನಿ ವಾರ್ಡ್ ನಂ.10ರಲ್ಲಿ ಮಳೆ ನೀರು ಚರಂಡಿ ನಿರ್ಮಿಸುವ ಕಾಮಗಾರಿಯನ್ನು ಕೈಗೊಂಡು ಈ ಭಾಗದಲ್ಲಿ ಪ್ರವಾಹ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ವಾರ್ಡ್ ನಂ.24ರ ಬಾಗಾಯತ್ ಗಲ್ಲಿಯಲ್ಲಿ ಅತಿಕ್ರಮಣ ತೆರವುಗೊಳಿಸಿ ಮಳೆ ಚರಂಡಿ ನಿರ್ಮಿಸುವ ಮೂಲಕ ಪ್ರವಾಹ ಪರಿಸ್ಥಿತಿ ಎದುರಾಗದಂತೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ರಾಮನಗರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಒಂದು ಕೋಟಿ ರೂ. ಅವಶ್ಯಕತೆ ಇದ್ದು, ಮಹಾನಗರ ಪಾಲಿಕೆಯಿಂದ ತುರ್ತು ಅನುದಾನವನ್ನು ಬಳಸಿಕೊಂಡು ಕೂಡಲೇ ಅಗತ್ಯ ಕಾಮಗಾರಿ ಕೈಗೊಂಡು ರಾಮನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಬ್ರಾಹಿಂರೋಜಾ ಹತ್ತಿರ ಕೋಟೆಗೋಡೆ ಪ್ರದೇಶದಲ್ಲಿ ಅತಿಕ್ರಮಣ ಮಾಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗಲು ಜಾಗವಿಲ್ಲದೇ ನೀರು ನಿಂತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿಕ್ರಮಣ ತೆರವುಗೊಳಿಸದಂತೆ ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ನ್ಯಾಯಾಲದ ಆದೇಶ ಬರುವರೆಗೆ ಕಾಯ್ದು ಕುಳಿತುಕೊಳ್ಳದೇ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ವಹಿಸಿ, ಅತಿಕ್ರಮಣ ಮಾಡಿಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಶಾಲೆ-ಅಂಗನವಾಡಿ

ಜಿಲ್ಲೆಯಲ್ಲಿರುವ ಶಾಲೆ- ಅಂಗನವಾಡಿಯ ಶಿಥಿಲಾವ್ಯವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡದೇ ಪರ್ಯಾಯ ವ್ಯವಸ್ಥೆ ಕೈಗೊಂಡು ಪಾಠ ಬೋಧನೆ ಮಾಡಬೇಕು. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಯಾವುದೇ ಅವಘಢಗಳು ಸಂಭವಿಸದಂತೆ ನಿಗಾ ವಹಿಸಿ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಕ್ಕಳ ಪಾಲಕರು, ಶಾಲೆ ಮುಖ್ಯೋಪಾಧ್ಯಾಯರು ಸಭೆ ನಡೆಸಿ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಲಮಟ್ಟಿ ಜಲಾಶಯಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಅವಶ್ಯಕತೆ ಇರುವ ಕೆರೆಗಳನ್ನು ತುಂಬಿಸಲು ಈ ನೀರನ್ನು ಬಳಸಿಕೊಂಡು ಕೆರೆ ತುಂಬಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ ಅವರು, ಒಟ್ಟಾರೆ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕೈಗೊಂಡಿರುವ ಕಾಮಗಾರಿಗಳ ಮಾಹಿತಿ ನೀಡಿದರು.

ನಾಗಠಾಣ ಶಾಸಕ ವಿಠಲ ಕಟಕದೊಂಡ, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಡಿಸಿ ಸೋಮಲಿಂಗ ಗೆಣ್ಣೂರ, ಎಸಿ ಗುರುನಾಥ ದಡ್ಡೆ, ಅನುರಾಧಾ ವಸ್ತ್ರದ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net