

ಹಿರೇಕೆರೂರ: ಯಾವುದೇ ರೋಗ ಬರುವುದಕ್ಕಿಂತ ಮೊದಲು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ, ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ಹೃದಯರೋಗ ತಜ್ಞವೈದ್ಯ ಶರತ್ ಸಂಗನಗೌಡ್ರ ಹೇಳಿದರು.
ಪಟ್ಟಣದ ಮಾಗನೂರ ಆಸ್ಪತ್ರೆಯಲ್ಲಿ ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆ, ಮಾಗನೂರ ಹೆಲ್ತ್ ಕೇರ್ ಆಸ್ಪತ್ರೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಇಂದು ಒತ್ತಡದ ಕೆಲಸಗಳು ಹೆಚ್ಚುತ್ತಿವೆ. ಅದರಂತೆ ದಣಿವು ವಿಪರೀತವಾಗುತ್ತಿದೆ. ಒಳ್ಳೆಯ ಪರಿಸರ, ಗಾಳಿ, ನೀರು, ದೊರಕುತ್ತಿಲ್ಲ. ಕಲಬೆರಕೆ, ವಿಷಪೂರಿತ ಆಹಾರ ದೇಹ ಸೇರಿ, ನಾನಾ ರೋಗಗಳಿಂದ ಬಳಲುವಂತಾಗಿದೆ. ಆರೋಗ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ಏನೇ ಸಣ್ಣ ಸಮಸ್ಯೆ ಎದುರಾದಾಗ ಕೂಡಲೇ ಹತ್ತಿರದ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಡಾ. ಮನು ಮಾಗನೂರ ಮಾತನಾಡಿ, ಆರೋಗ್ಯಯುತ ಜೀವನ ಸಾಗಿಸಲು ಉತ್ತಮ ಆಹಾರ ಪದ್ಧತಿ ಕ್ರಮ ಅನುಸರಿಸಬೇಕು. ಕೆಲವು ತಪ್ಪು ಜೀವನಶೈಲಿ, ದೇಹಾರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವುದರಿಂದ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಶಿಬಿರದಲ್ಲಿ 500ಕ್ಕೂ ಹೆಚ್ಚು ಸಾರ್ವಜನಿಕರು ಬಿಪಿ, ಇಸಿಜಿ, 3ಡಿ ಇಕೋ ಸೇರಿ ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ಮಾಡಿಸಿಕೊಂಡರು. ಡಾ. ಉಷಾ, ಕೋಮಲಾ ಮಾಗನೂರ, ಸಾರ್ವಜನಿಕರು ಇದ್ದರು.
ಗ್ರಾಮೀಣ ಭಾಗದ ಬಡವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟವಾಗುತ್ತದೆ. ಪಟ್ಟಣದಲ್ಲಿ ಈ ಆಸ್ಪತ್ರೆ ಸ್ಥಾಪಿಸಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಈ ಭಾಗದ ರೋಗಿಗಳಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಶಿಬಿರಗಳನ್ನು ಹೆಚ್ಚೆಚ್ಚು ಆಯೋಜಿಸಿದರೆ ರೋಗಿಗಳಿಗೆ ಮತ್ತಷ್ಟು ಸಹಾಯಕವಾಗಲಿದೆ. | ಎನ್.ಎಸ್. ಹೆಗ್ಗೇರಿ ಶಿಬಿರಾರ್ಥಿ