

ಮೈಸೂರು: ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಜತೆಗೆ ಕುಡಿಯುವ ನೀರಿನ ಶುಚಿತ್ವದ ಬಗ್ಗೆ ಜಾಗರೂಕರಾಗಿ ಇರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂನಲ್ಲಿ ಸೋಮವಾರ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಬೋರ್‌ವೆಲ್‌ಗಳು ಇರುವ ಕಡೆ ಕೊಳಚೆ ನೀರು ಹಾಗೂ ಕಸ ತೆರವುಗೊಳಿಸಬೇಕು. ಕುಡಿಯುವ ನೀರಿನಿಂದ ಸಮಸ್ಯೆಗಳು ಉದ್ಭವಿಸುವ ಮುನ್ನವೇ ಎಲ್ಲ ಗ್ರಾಮಗಳಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಅಗತ್ಯ ಕ್ರಮ ವಹಿಸುವ ಸಂಬಂಧ ಗ್ರಾಪಂನ ಎಲ್ಲ ಸಿಬ್ಬಂದಿ, ನೌಕರರು ಹಾಗೂ ಆಶಾ ಕಾರ್ಯಕರ್ತೆಯರು, ಸಖಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬೇಕು. ಜೆಜೆಎಂ ಪೈಪ್‌ಲೈನ್ ಹಾಗೂ ಇತರ ನೀರಿನ ಪೈಪ್‌ಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಇವುಗಳನ್ನು ಬದಲಾಯಿಸಲು ಅಥವಾ ದುರಸ್ತಿಗೊಳಿಸಲು ಕ್ರಮ ವಹಿಸಬೇಕು ಎಂದರು.
ನಿಯಮಿತವಾಗಿ ನೀರಿನ ಪರೀಕ್ಷೆಗಳನ್ನು ನಡೆಸಿ ಶುದ್ಧತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಡೆಂೆ ಹಾಗೂ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಸ್ತೆ, ಚರಂಡಿ ಹಾಗೂ ಇತರೆಡೆಗಳಲ್ಲಿ ನೀರು ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ ಹಾಗೂ ಗುಣಮಟ್ಟದ ಅರಿವು ಮೂಡಿಸಲು ಹಾಗೂ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು. ನೀರಿನ ಸುರಕ್ಷಿತ ಸರಬರಾಜಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗದಂತೆ ನೀರು ಪೂರೈಸಲು ಕ್ರಮ ವಹಿಸಬೇಕು. ಅವಶ್ಯವಿರುವೆಡೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಕಾಲ ಕಾಲಕ್ಕೆ ಎಫ್‌ಟಿಕೆ ಟೆಸ್ಟ್ ಹಾಗೂ ಬ್ಯಾಕ್ಟೀರಿಯಾ ಟೆಸ್ಟ್ ನಡೆಸಬೇಕು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಬಳಕೆಗಾಗಿ ಮೇಲುಸ್ತುವಾರಿ ವಹಿಸುವಂತೆ ನಿರ್ದೇಶಿಸಿದರು.
ನೀರಿನ ಸಮಸ್ಯೆ ನಿವಾರಣೆಗೆ ಕಾರ್ಯನಿರ್ವಾಹಕ ಅಧಿಕಾರಿ, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ನೈಮಲ್ಯ ಉಪ ವಿಭಾಗ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ತಂಡಗಳನ್ನಾಗಿ ರಚಿಸಿಕೊಂಡು ಕಾರ್ಯನಿರ್ವಹಿಸಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮುನ್ನ ಸಂಬಂಧಿಸಿದ ತಾಲೂಕು ಕಚೇರಿಗಳಲ್ಲಿ ನೋಂದಾಯಿಸುವುದು. ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕು. ನೀರಿನ ಶೇಖರಣಾ ಘಟಕ ಹಾಗೂ ಸರಬರಾಜು ಘಟಕಗಳ ಶುದ್ಧತೆ ಹಾಗೂ ಗುಣಮಟ್ಟವನ್ನು ಪರೀಕ್ಷಿಸಿಕೊಂಡು ಸಂಪೂರ್ಣ ವರದಿ ನೀಡುವಂತೆ ಸೂಚಿಸಿದರು.
ಕುಡಿಯುವ ನೀರಿನ ಕೊರತೆ ಕಂಡುಬಂದಲ್ಲಿ ಜಿಲ್ಲಾಧಿಕಾರಿ ಈಗಾಗಲೇ ನಿರ್ದೇಶನ ನೀಡಿರುವಂತೆ ಟ್ಯಾಂಕರ್ ಮ್ಯಾನೇಜ್‌ಮೆಂಟ್ ಮೊಬೈಲ್ ಆ್ಯಪ್ ಬಳಸಿಕೊಂಡು ಟ್ಯಾಂಕರ್ ಸ್ವಚ್ಛವಾಗಿರುವ ಬಗ್ಗೆ ಖಾತ್ರಿಪಡಿಸಿಕೊಂಡು ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ(ಆಡಳಿತ) ಡಾ.ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ರಂಜಿತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ, ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು, ತಾಲೂಕು ಆರೋಗ್ಯಾಧಿಕಾರಿಗಳು, ಗ್ರಾ.ಕು.ನೀ.ನೈ. ಉಪ-ವಿಭಾಗಗಳ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.