

ವಿಜಯವಾಣಿ ಸುದ್ದಿಜಾಲ ತುಮಕೂರು
ಜಿಲ್ಲೆಯೆಲ್ಲೆಡೆ ವರುಣಾರ್ಭಟ ಮುಂದುವರಿದಿದ್ದು, ಸೋಮವಾರ ರಾತ್ರಿ ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಸುರಿದ ಮಳೆಗೆ ಜಯಮಂಗಲಿ ನದಿಗೆ ಜೀವಬಂದಿದೆ. ಮುಂದಿನ ಮೂರು ದಿನ ಕೂಡ ಜಿಲ್ಲೆಯಲ್ಲಿ ಮಳೆ ನಿರೀೆಯಿದ್ದು, ಈಗಾಗಲೇ ಯಲ್ಲೋ ಅರ್ಲಟ್ ಘೋಷಿಸಲಾಗಿದೆ, ಜಯಮಂಗಲಿ ನದಿ ಪ್ರವಾಹ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜನ-, ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಆಯಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೂಚಿಸಿದ್ದಾರೆ.
ಮಧುಗಿರಿ ತಾಲೂಕು ಚನ್ನಸಾಗರ, ನಂಜಾಪುರ ಗ್ರಾಮಗಳಿಗೆ ಮಂಗಳವಾರ ಎಸ್ಪಿ ಕೆ.ವಿ.ಅಶೋಕ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಶುಭಕಲ್ಯಾಣ್, ಕಳೆದ 2 ವರ್ಷಗಳ ಹಿಂದೆ ಭಾರಿ ಮಳೆಯಿಂದ ಉಂಟಾದ ಜಯಮಂಗಲಿ ನದಿ ಪ್ರವಾಹದಿಂದ ಚನ್ನಸಾಗರ ಸಂಪೂರ್ಣ ಜಲಾವೃತವಾಗಿ ಜನ-ಜೀವನ ಅಸ್ತವ್ಯಸ್ತವಾಗಿತ್ತು. ಇದೇ ರೀತಿ ಧಾರಾಕಾರ ಮಳೆ ಮುಂದುವರಿದರೆ ನದಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ ಮಾಡಬೇಕು ಎಂದು ತಹಸೀಲ್ದಾರ್ ಮಂಜುನಾಥ್ ಹಾಗೂ ಪಿಡಿಒ ಮುತ್ತುರಾಜ್ ಅವರಿಗೆ ಸೂಚಿಸಿದರು.
ಮುಂಜಾಗೃತ ಕ್ರಮವಾಗಿ ಕೋಡಗದಾಲ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿ, ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಚನ್ನಸಾಗರ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಬೇಕು. ಪ್ರವಾಹ ಮುನ್ಸೂಚನೆ ಕಂಡು ಬಂದ ಕೂಡಲೇ ಸ್ಥಳಿಯ ಅಧಿಕಾರಿಗಳು ಜಿಲ್ಲಾಡಳಿತ, ಜಿಪಂ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತುರ್ತಾಗಿ ಮಾಹಿತಿ ನೀಡಬೇಕು ಎಂದರು. ಜಯಮಂಗಲಿ ನದಿ ನೀರು ಪ್ರವಾಹ ಹೆಚ್ಚಾಗಿ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಪ್ರವಾಹ ಉಂಟಾದಲ್ಲಿ ಚೆನ್ನಸಾಗರ ಗ್ರಾಮದಲ್ಲಿರುವ ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆಯ ಶ್ರೀಜಯಮಂಗಲಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಬೇಕು ಎಂದರು.
ತೋಟದ ಮನೆಗಳಲ್ಲಿ ವಾಸಿಸುತ್ತಿರುವವರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಮನವಿ ಮಾಡಿದರಲ್ಲದೆ, ಚನ್ನಸಾಗರ ಗ್ರಾಮದ ರಾಜಗಾಲುವೆಗಳಲ್ಲಿರುವ ಕಸ-, ಕಡ್ಡಿಗಳನ್ನು ಕೂಡಲೇ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು. ಮುಂದಿನ 2 ದಿನ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜಿಲ್ಲೆಯಲ್ಲಿ ಆರೆಂಜ್ ಅರ್ಲಟ್ ಘೋಷಿಸಲಾಗಿದೆ ಎಂದರು.
ಜಯಮಂಗಲಿ ನದಿ ಸುತ್ತ-ಮುತ್ತಲಿರುವ ನಾಗಮ್ಮನ ಪಾಳ್ಯ, ಚನ್ನಸಾಗರ, ನಂಜಾಪುರ ಗ್ರಾಮಗಳಲ್ಲಿರುವ ಜನ-ಜಾನುವಾರುಗಳ ಪಟ್ಟಿ ಮಾಡಬೇಕು. ಸಂಭವನೀಯ ಪ್ರವಾಹದ ಮುನ್ನವೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಸೂಕ್ತ. ಕಾಳಜಿ ಕೇಂದ್ರದಲ್ಲಿ ಔಷಧ, ಆಹಾರ ದಾಸ್ತಾನಿಗೆ ಅಧಿಕಾರಿ ನಿಯೋಜಿಸಿ ಜವಾಬ್ದಾರಿವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಗಿರೀಶ್ಬಾಬು ರೆಡ್ಡಿ ಮತ್ತಿತರರು ಇದ್ದರು.
ಜಾನುವಾರು ಸ್ಥಳಾಂತರಕ್ಕೆ ಕ್ರಮ: ನಾಗಮ್ಮನ ಪಾಳ್ಯ, ಚನ್ನಸಾಗರ, ನಂಜಾಪುರ ಗ್ರಾಮಗಳಲ್ಲಿ 167 ಹಸು, 7 ಎಮ್ಮೆ, 43 ಕುರಿ, 43 ಮೇಕೆ, 15000 ಕೋಳಿಗಳಿದ್ದು, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಮಾಲೀಕರಿಗೆ ಮನವಿ ಮಾಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿದ್ಧನಗೌಡ ತಿಳಿಸಿದರು.
ಜಯಮಂಗಲಿ ನದಿ ಪಾತ್ರದಲ್ಲಿ ವಾಸಿಸುವ ಜನರು ಸಂಭವನೀಯ ಪ್ರವಾಹದ ಮುನ್ನೆಚ್ಚರಿಕಾ ಸಂದೇಶ ಬಂದ ಕೂಡಲೇ ಜನರು ಮನೆಯಿಂದ ಹೊರ ಬಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕು. ಸ್ಥಳಿಯ ಪಶು ಚಿಕಿತ್ಸಾಲಯದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು. ಲೈಫ್ ಜಾಕೆಟ್, ರೋಪ್, ಬೋಟ್ ಮತ್ತಿತರ ಸುರಕ್ಷತಾ ಸಲಕರಣೆ ಸಿದ್ಧವಿಟ್ಟುಕೊಳ್ಳಬೇಕು.| ಶುಭಕಲ್ಯಾಣ್ ಜಿಲ್ಲಾಧಿಕಾರಿ