ಹುಬ್ಬಳ್ಳಿ: ಅವಳಿನಗರದಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜಕಾಲುವೆಗಳಲ್ಲಿ ಸರಿಯಾಗಿ ಕೊಳಚೆ ಹರಿಯದೇ ರಸ್ತೆಗಳಲ್ಲಿ ಹರಿದು ಜನರು ಸಮಸ್ಯೆ ಎದುರಿಸಿದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಮಹಾನಗರ ಪಾಲಿಕೆಗೆ ಆಗ್ರಹಿಸಿದ್ದಾರೆ.
ನಾಲಾಗಳಲ್ಲಿ ಕಸವನ್ನು ತಂದು ಹಾಕುತ್ತಿರುವುದರಿಂದ ಅಲ್ಲಿ ಹೂಳು ತುಂಬಿದೆ. ಇದರಿಂದ ಅವಳಿ ನಗರದಲ್ಲಿ ಸ್ವಲ್ಪ ಮಳೆಯಾದರೂ ಸಹಿತ ರಾಜಕಾಲುವೆ ಹಾಗೂ ಗಟಾರುಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತದೆ. ವಾಹನ ಸವಾರರು ಹರಸಾಹಸ ಪಟ್ಟು ತಮ್ಮ ಸ್ಥಳಗಳಿಗೆ ತಲುಪುವ ಪರಿಸ್ಥಿತಿ ಬಂದಿದೆ.
ತಗ್ಗು ಪ್ರದೇಶದಲ್ಲಿ ಮನೆಗಳಿಗೆ ಕೊಳಚೆ ನುಗ್ಗಿ ಆಹಾರ ಪದಾರ್ಥ, ಬಟ್ಟೆ ನೀರಿನಲ್ಲಿ ಕೊಚ್ಚಿ ಹೋಗಿ ಬಡವರ ಬದುಕು ಬರ್ಬರವಾಗುತ್ತಿದೆ.
ನಗರದ ದಾಜೀಬಾನ ಪೇಟ, ಮಹಾವೀರ ಗಲ್ಲಿ ಹಾಗೂ ಜವಳಿ ಸಾಲ, ವಿದ್ಯಾನಗರ ರಸ್ತೆಯ ಸುತ್ತ ಮುತ್ತಲೂ ಅನೇಕ ಮಳಿಗೆಗಳಿಗೆ ಇತ್ತೀಚೆಗೆ ಮಳೆ ನೀರು ಹೊಕ್ಕಿದೆ. ಅಂಗಡಿಗಳ ಕೆಳಗಡೆ ಇರುವ ವಾಹನ ನಿಲುಗಡೆ ಹಾಗೂ ರಸ್ತೆಗೆ ಹೊಂದಿಕೊಂಡಿರುವ ಮಳಿಗೆಗಳಿಗೆ ಮಳೆ ನೀರು ಹರಿದು ಅಪಾರ ಪ್ರಮಾಣದಲ್ಲಿ ವ್ಯಾಪಾರಸ್ಥರಿಗೆ ಹಾನಿ ಯುಂಟಾಗಿದೆ.
ಮಳೆ ಬಂದಾಗೊಮ್ಮೆ ಅಲ್ಲಿಯ ವ್ಯಾಪಾರಸ್ಥರು ನೀರನ್ನು ಹೊರ ಹಾಕುವದರಲ್ಲಿಯೇ ತಮ್ಮ ಸಮಯವನ್ನು ಕಳೆಯಬೇಕಾಗಿದೆ. ಇದರಿಂದ ವಹಿವಾಟಿನಲ್ಲಿ ಕೂಡ ಕುಂಠಿತವಾಗುತ್ತಿದೆ.
ಸ್ಟೇಶನ್ ರಸ್ತೆ ರೇಲ್ವೆ ಬ್ರಿಜ್ ಕೆಳಗೆ ಕೊಳಚೆ ನಿಂತು ವಾಹನ ಸವಾರರು ಪರದಾಡಿದರು. ಹಳೇಹುಬ್ಬಳ್ಳಿ ಸೇತುವೆ, ಗಬ್ಬೂರ ಸವಿರ್ಸ್ ರಸ್ತೆಯ ಕೆಳ ಹಂತದ ಸೇತುವೆಯಲ್ಲಿ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇರುವುದಿಲ್ಲ.
ಮಹಾನಗರ ಪಾಲಿಕೆಯವರು ವ್ಯಾಪಾರಸ್ಥರ ಮಳಿಗೆ ಹಾಗೂ ಆಸ್ತಿಪಾಸ್ತಿಗಳ ರಣೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರ ಕಾರ್ಯಪಡೆಯನ್ನು ರಚಿಸಬೇಕು.
ರಾಜಕಾಲುವೆ, ಗಟಾರುಗಳನ್ನು ಸ್ವಚ್ಚ ಮಾಡಿಸುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲಿದೆ. ಇದರಿಂದ ಯಾವುದೇ ಅವಡಗಳು ಸಂಭವಿಸುವುದಿಲ್ಲ. ಮಹಾನಗರ ಪಾಲಿಕೆ ಈಗಲೇ ಎಚ್ಚೆತ್ತುಕೊಳ್ಳಬೇಕೆಂದು ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಅವರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.