

ಮೈಸೂರು: ಸಾಮಾಜಿಕವಾಗಿ ಮುಂದುವರಿದ ಜನರಿಗೆ ಮೂರೇ ದಿನಗಳಲ್ಲಿ ಇಡಬ್ಲುೃಎಸ್ ಮೂಲಕ ಮೀಸಲಾತಿ ಕೊಟ್ಟಿರುವಂತೆಯೇ 3 ದಿನಗಳಲ್ಲಿ ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯದಿದ್ದರೆ ಮತ ಕೊಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಪ್ರತಿ ಹಳ್ಳಿ-ಹಳ್ಳಿಯಲ್ಲೂ ಕೈಗೊಳ್ಳಬೇಕು ಎಂದು ಸಾಹಿತಿ ದೇವನೂರ ಮಹಾದೇವ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಆಯೋಜಿಸಿದ್ದ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರತಿ ಹಳ್ಳಿ-ಹಳ್ಳಿಯಲ್ಲಿ ಮತ ನಿರಾಕರಣೆ ಪ್ರತಿಜ್ಞೆ ಕೈಗೊಳ್ಳುವ ನಿರ್ಣಾಯಕ ಹೋರಾಟ ರೂಪಿಸುವ ಅಗತ್ಯವಿದೆ. ಈ ಸರ್ಕಾರ ನಮ್ಮ ಮಾತುಗಳನ್ನು ಕೇಳುವ ಗ್ಯಾರಂಟಿ ಇಲ್ಲ. ಏಕೆಂದರೆ ಇದು ಜನಪ್ರತಿನಿಧಿ ಸರ್ಕಾರವಲ್ಲ, ಹಣ ಪ್ರತಿನಿಧಿ ಸರ್ಕಾರ ಎಂದು ಟೀಕಿಸಿದರು.
ನಮ್ಮ ಮತ ನಮ್ಮ ಕೈಯಲ್ಲಿಯೇ ಇದೆ. ಹಾಗಾಗಿ, ನಮ್ಮ ಕೈಯಲ್ಲಿರುವ ಅಸ್ತ್ರವನ್ನು ಬಳಸುವ ಎಚ್ಚರಿಕೆ ನೀಡಬೇಕು. ನಮ್ಮ ಮತವನ್ನು ನಿಮಗೆ ಕೊಡುವುದಿಲ್ಲವೆಂದು ಹಳ್ಳಿ ಹಳ್ಳಿಯಲ್ಲಿ ಪ್ರತಿಜ್ಞೆ ಮಾಡುವುದಾದರೆ 3 ದಿನಗಳಲ್ಲಿ ನಮ್ಮ ಬೇಡಿಕೆ ಈಡೇರುವ ಸಾಧ್ಯತೆ ಇದೆ ಎಂದರು.
ಈ ಸಂಬಂಧ ಪ್ರತಿ ಹಳ್ಳಿಗೆ ಹೋಗಬೇಕು. ಹಳ್ಳಿಗಳು ಮುಗಿದ ಮೇಲೆ ತಾಲೂಕು ಕೇಂದ್ರದಲ್ಲಿ ಸಮಾವೇಶ ಮಾಡಬೇಕು. ಎಲ್ಲ ಸಂಘಟನೆಗಳು ಐಕ್ಯವಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು. ಈ ಕಾಯ್ದೆಗಳನ್ನು ಹಿಂಪಡೆಯುವಂತೆ ನಡೆಸಿದ ಹೋರಾಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಮತ ನಿರಾಕರಣೆ ಪ್ರತಿಜ್ಞೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ-2020 ರೈತರ ಭೂಮಿ ಕಿತ್ತುಕೊಂಡು ಬೀದಿಗೆ ಎಸೆಯುತ್ತದೆ. ಯಾರಿಗೆ ಬೇಕಾದರೂ ಭೂಮಿ ಕೊಡಲು, ಸೈಟ್, ವ್ಯವಹಾರ ಮಾಡಲು ಅನುಕೂಲ ಕಲ್ಪಿಸುತ್ತದೆ. ಇಲ್ಲಿ ವ್ಯವಸಾಯ ಮಾಡುವುದಿಲ್ಲ. ರೈತರನ್ನು ಕಳೆ ತರಹ ಕಿತ್ತು ಎಸೆಯಲಾಗುತ್ತದೆ. ಹಾಗಾಗಿ ಈ ಕಾಯ್ದೆ ವಾಪಸ್ ಪಡೆಯುವಂತೆ ಹೇಳಿದರೆ ಸರ್ಕಾರ ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.