

ಶೃಂಗೇರಿ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆ ಓಡಾಟ ನಡೆಸುತ್ತಿದ್ದು , ಹಲವು ಕಡೆ ರೈತರ ತೋಟಗಳಲ್ಲಿ ಹಾನಿ ಮಾಡಿರುವುದರಿಂದ ಶೃಂಗೇರಿ ಕ್ಷೇತ್ರದಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ತಿಳಿಸಿದರು.
ಅರಣ್ಯ ಇಲಾಖೆಯಲ್ಲಿ ಆರ್‌ಎ್ಒ ಮಧುಕುಮಾರ್‌ಗೆ ಸಮಿತಿಯಿಂದ ಮನವಿ ಸಲ್ಲಿಸಿ ಮಾತನಾಡಿ, ಆನೆಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಓಡಿಸುವ ಬದಲು ಕೂಡಲೇ ಅವುಗಳನ್ನು ಸ್ಥಳಾಂತರಿಸಬೇಕು. ಸರ್ಕಾರದ ಆದೇಶಕ್ಕೆ ಕಾಯದೇ ಮೇಲಾಧಿಕಾರಿಗಳ ಹಂತದಲ್ಲಿ ತೀರ್ಮಾನ ಕೈಗೊಂಡು ಅನಾಹುತ ನಡೆಯದಂತೆ ನೋಡಿಕೊಳ್ಳಬೇಕು. ಆನೆ ಕಾಣಿಸಿಕೊಂಡ ಪ್ರದೇಶಗಳಲ್ಲಿ ಇಲಾಖೆ ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಆನೆ ಹಾವಳಿ ಮಾಡಿದ ತೋಟಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಉಪಾಧ್ಯಕ್ಷ ನಾಗೇಶ್ ನಾಯ್ಕ, ಕಾರ್ಯದರ್ಶಿ ಚಂದ್ರಶೇಖರ್ ಗೋಳ್ಗೋಡು, ಪದಾಧಿಕಾರಿ ತಿಮ್ಮಯ್ಯಭಟ್, ಕೃಷಿಕರಾದ ಮಹೇಶ್ ತೆಕ್ಕೂರು, ನವೀನ್ ಕಿಗ್ಗಾ ಉಪಸ್ಥಿತರಿದ್ದರು.