

ಮದ್ದೂರು: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಬೆಸಗರಹಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆ. 13ರಂದು ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸಂಸದರ ನೇತೃತ್ವದಲ್ಲಿ ದಿಶಾ ಸಭೆ ನಡೆಯಲಿದ್ದು, ಅಧಿಕಾರಿಗಳು ನೀಲನಕ್ಷೆ ಸಿದ್ಧಪಡಿಸಿ ಮಾಹಿತಿ ನೀಡಬೇಕು ಎಂದರು.
ಗ್ರಾಮದ ಪಕ್ಕದಲ್ಲಿರುವ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಪಾದಚಾರಿ ಮಾರ್ಗ ಮಾಡಬೇಕು. ಅಲ್ಲದೆ ಆಸ್ಪತ್ರೆಗೆ ಆಂಬುಲೆನ್ಸ್ ವ್ಯವಸ್ಥೆ, ಸಿಬ್ಬಂದಿ ಕೊರತೆ ನೀಗಿಸುವುದರ ಜತೆಗೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು. ಪ್ರಸಕ್ತ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಗೊಳ್ಳಲಿದ್ದು, ಶಾಲೆಗೆ ಬೇಕಾದ ಹೆಚ್ಚುವರಿ ಕಟ್ಟಡ ಮತ್ತು ಶೌಚಗೃಹ, ಕಾಂಪೌಂಡ್ ಇತರ ಕಾಮಗಾರಿಗಳನ್ನು ನರೇಗಾ ಯೋಜನೆ ಮೂಲಕ ಮಾಡಿಸಿಕೊಳ್ಳುವಂತೆ ಬಿಇಒ ಮಹದೇವುಗೆ ಸೂಚಿಸಿದರು.
ಕೈ ಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ತರಬೇತಿ ಕಾರ್ಯಕ್ರಮ ಆಯೋಜಿಸುವುದರ ಜತೆಗೆ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಿಸಬೇಕು. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಪಂ ಇಒ ಮುನಿರಾಜು, ಸಿಡಿಪಿಒ ಚೇತನ್‌ಕುಮಾರ್ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.