

ಕನಕಗಿರಿ: ಗ್ಯಾರಂಟಿ ಯೋಜನೆ ಫಲಾನುಭವಿಗಳ ಯಶೋಗಾಥೆ ಸಂಗ್ರಹಿಸಿ ಹೋಬಳಿ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರಚುರಪಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹಜರತ್ ಹುಸೇನ್ ಹೇಳಿದರು.
ಇದನ್ನೂ ಓದಿ:ಮಾದರಿಯಾಗಿವೆ ಗ್ಯಾರಂಟಿ ಯೋಜನೆಗಳು
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬುಧವಾರ ಮಾತನಾಡಿದರು.
ತಿರಸ್ಕೃತಗೊಂಡ ಅರ್ಜಿಗಳನ್ನು ಯಾವ ಮಾನದಂಡಗಳ ಆಧಾರದ ಮೇಲೆ ತಿರಸ್ಕರಿಸಲಾಗಿದೆ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು 2011 ರ ಜನಗಣತಿ ಆಧಾರದ ಮೇಲೆ ಕುಟುಂಬ ಸದಸ್ಯರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಪಡಿತರ ಚೀಟಿ ನೀಡಲಾಗುವುದು ಎಂದರು. ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಿ. ಕಲಿಕೇರಿ-ಬೆನಕನಾಳ ನಡುವೆ ಸಂಚರಿಸುವ ಬಸ್‌ಗಳು ಸುಳೇಕಲ್ ಮಾರ್ಗವಾಗಿ ಸಂಚರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ತಾವರಗೇರಾ, ಪುರ, ಯತ್ನಟ್ಟಿ, ಕರಡೋಣಾ, ನವಲಿ ಮಾರ್ಗವಾಗಿ ಬಸ್ ಸಂಚರಿಸಲು ಬೇಕಾದ ಅಗತ್ಯ ಕ್ರಮ ವಹಿಸಲು ತಿಳಿಸಿದರು.
ಶಿಶು ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲಿಸಿ ಹೋಬಳಿ ಮಟ್ಟದಲ್ಲಿ ಫಲಾನುಭವಿಗಳ ಜತೆ ಸಂವಾದ ಹಾಗೂ ಯೋಜನೆ ವ್ಯಾಪ್ತಿಯಿಂದ ಹೊರಗುಳಿದ ಫಲಾನುಭವಿಗಳನ್ನು ಗುರುತಿಸಿ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್, ವಿಷಯ ನಿರ್ವಾಹಕ ಕೊಟ್ರಯ್ಯ, ನವಲಿ ಶಾಖಾಧಿಕಾರಿ ಮಲ್ಲಿಕಾರ್ಜುನ, ಗ್ಯಾರಂಟಿ ಸಮಿತಿ ಸದಸ್ಯರಾದ ಕರಿಯಪ್ಪ ಹನುಮನಾಳ, ನೀಲಕಂಠ ಬಡಿಗೇರ, ಪಿಡಿಒಗಳಾದ ಲಕ್ಷ್ಮಣ, ಯು.ಮಲ್ಲಿಕಾರ್ಜುನ ಇತರರಿದ್ದರು.