ಸಾಲ ವಸೂಲಾತಿಗೆ ಹೆಚ್ಚಿನ ಮುತುವರ್ಜಿ ವಹಿಸಿ

22-02-Shiva-2
ರಾಯಚೂರಿನ ಜೆಸಿ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಸಾಲ ವಸೂಲಾತಿ ಕುರಿತು ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕ ಶೇಖ್ ಹುಸೇನ್ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ, ಪಾಟೀಲ್, ನಿರ್ದೇಶಕರಾದ ಜಿ.ಎಸ್.ಕಲ್ಲಯ್ಯಸ್ವಾಮಿ, ಎನ್.ಭೀಮರೆಡ್ಡಿ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃರ್ದದಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಡಾ.ಎ.ಬಿ.ವಿಜಯಕುಮಾರ ಇದ್ದರು.
Published on

ರಾಯಚೂರು: ಸಾಲ ವಸೂಲಾತಿ ಚೆನ್ನಾಗಿದ್ದಾಗ ಮಾತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆರ್ಥಿಕವಾಗಿ ಸಬಲವಾಗಲು ಸಾಧ್ಯವಿದ್ದು, ಸಂಘದ ಕಾರ್ಯನಿರ್ವಾಹಣಾಕಾರಿ ಮತ್ತು ಸಿಬ್ಬಂದಿಗಳು ಸಾಲ ವಸೂಲಾತಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಹೇಳಿದರು.
ಸ್ಥಳೀಯ ಜೆಸಿ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಕಾರಿ ಮತ್ತು ಸಿಬ್ಬಂದಿಗಳಿಗೆ ಸಾಲ ವಸೂಲಾತಿ ಕುರಿತು ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕದ ಬಗ್ಗೆ ನಿಮ್ಮಲ್ಲಿ ಗೊಂದಲವಿರಬಹುದು. ಆದರೆ ಸದನದಲ್ಲಿ ವಿಧೇಯಕ್ಕೆ ಇನ್ನು ಅನುಮೋದನೆ ದೊರೆತಿಲ್ಲ. ಜಂಟಿ ಸಲಹಾ ಸಮಿತಿ ರಚನೆ ತೀರ್ಮಾನಿಸಲಾಗಿದ್ದು, ಸಮತಿ ರಚನೆಯಾಗಿ, ವರದಿ ನೀಡಿದ ನಂತರ ಅಂತಿಮ ತೀರ್ಮಾನ ಬರಲಿದ್ದು, ಅಲ್ಲಿಯವರೆಗೆ ಅದರ ಬಗ್ಗೆ ಚಿಂತನೆ ಮಾಡಬೇಕಾಗಿಲ್ಲ.
ಸಂಘಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸದಸ್ಯರಿಗೆ ಸಾಲ ನೀಡುವಾಗ ಹೆಚ್ಚಿನ ದಾಖಲೆಗಳನ್ನು ಬ್ಯಾಂಕ್‌ಗಳು ಕೇಳುತ್ತಿದ್ದಾರೆ ಎನ್ನುವ ದೂರುಗಳು ಬರುತ್ತಿವೆ. ಈ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರೊಂದಿಗೆ ಚರ್ಚಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ವಿಜಯಕುಮಾರ ಪಾಟೀಲ್ ಶಾವಂತಗೇರಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃರ್ದದಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಡಾ.ಎ.ಬಿ.ವಿಜಯಕುಮಾರ ಮಾತನಾಡಿ, ಯಾವುದೇ ಸಾಲ ನೀಡುವ ಸಂಸ್ಥೆ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ, ಆ ಸಂಸ್ಥೆ ನೀಡಿದ ಸಾಲ ಯಾವ ತೊಂದರೆ, ಅಡೆತಡೆಯಿಲ್ಲದೆ ಸಾಲ ಮರಳಿ ಬರುವಂತಿರಬೇಕು. ಶೇ.60ರಷ್ಟು ಸಾಲ ವಸೂಲಾತಿ ಆಗುತ್ತಿದ್ದಲ್ಲಿ ಯಾವುದೇ ಸಮಸ್ಯೆಯಿರುವುದಿಲ್ಲ. ಹೆಚ್ಚಾದರೆ ಆರ್ಥಿಕ ಸ್ಥಿತಿ ಕ್ಷೀಣಿಸುತ್ತದೆ.
ಸಂಘಗಳ ಸಿಬ್ಬಂದಿ ಗುಣಾತ್ಮಕ ಸಾಲ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸಾಲ ಮರುಪಾವತಿ ಜತೆಗೆ ಸಾಲ ನೀಡುವುದರಿಂದ ಆತನ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತಿರಬೇಕು. ಉತ್ಪಾದಿತ ಯೋಜನೆಗಳಿಗೆ ಸಾಲ ನೀಡಿದರೆ ಮರುಪಾವತಿ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕ ಶೇಖ ಹುಸೇನ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಜಿ.ಎಸ್.ಕಲ್ಲಯ್ಯಸ್ವಾಮಿ, ಎನ್.ಭೀಮರೆಡ್ಡಿ ಹಾಗೂ ಜಿಲ್ಲೆಯ ವಿವಿಧ ಸಂಘಗಳ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net