ತ್ಯಾಜ್ಯ ತಂದು ಹಾಕುವವರ ವಿರುದ್ಧ ಕಾನೂನು ಕ್ರಮ ವಹಿಸಿ

22-GPT-4
ಗುಂಡ್ಲುಪೇಟೆಯಲ್ಲಿ ಹಿಂದು ಜಾಗರಣಾ ವೇದಿಕೆ ಸದಸ್ಯರು ಎಸ್‌ಪಿ ಕವಿತಾ ಅವರಿಗೆ ದೂರು ನೀಡಿದರು.
Published on

ಗುಂಡ್ಲುಪೇಟೆ: ನೆರೆ ರಾಜ್ಯಗಳಿಂದ ತಾಲೂಕಿಗೆ ತ್ಯಾಜ್ಯ ಸಾಗಿಸುವ ಪ್ರಕರಣ ಹೆಚ್ಚುತ್ತಿದ್ದು, ದಂಧೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ತಹಸೀಲ್ದಾರ್‌ಗೆ ಪತ್ರ ಬರೆದಿದ್ದಾರೆ.

ಅ.19ರಂದು ಪುರಸಭೆಯ ಕಸ ಸುರಿಯುವ ಪ್ರದೇಶದ ಪಕ್ಕದಲ್ಲಿ ಅಕ್ರಮವಾಗಿ ಸತ್ತ ಹಸು ಮತ್ತು ದನಗಳನ್ನು ಕಡಿದು ಅದರ ಮೂಳೆ ಮತ್ತು ಮಾಂಸವನ್ನು ಪ್ರತ್ಯೇಕಗೊಳಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಈ ಸ್ಥಳವು ಪುರಸಭೆಯ ವ್ಯಾಪ್ತಿಗೆ ಸೇರಿಲ್ಲ. ಖಾಸಗಿ ಜಾಗದಲ್ಲಿ ಸತ್ತ ದನ ಕರುಗಳ ಮೂಳೆ ಮತ್ತು ಮಾಂಸವನ್ನು ಶೇಖರಣೆ ಮಾಡುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸದರಿ ಜಾಗದ ಮಾಲೀಕರು ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮವಹಿಸಬೇಕೆಂದು ಮುಖ್ಯಾಧಿಕಾರಿ ವಸಂತಕುಮಾರಿ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.

ಹಿಂದು ಸಂಘಟನೆಗಳಿಂದ ದೂರು: ಪಟ್ಟಣದ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವ ಹಿಂದು ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು, ದಂಧೆಯಲ್ಲಿ ಪಾಲ್ಗೊಂಡಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.

ತಾಲೂಕಿನಲ್ಲಿ ಗೋಹತ್ಯೆ, ಗೋಸಾಕಣೆ, ಗೋಮಾಂಸ ಮಾರಾಟ ಮುಂತಾದ ದಂಧೆಗಳು ನಡೆಯುತ್ತಿವೆ. ಇವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಹಿಂದು ಸಮಾಜವನ್ನು ಜಾಗೃತಗೊಳಿಸುವ ಸಲುವಾಗಿ ಜನಾಂದೋಲನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net