ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

KALEEL BASHA
Published on

ಮಡಿಕೇರಿ: ಟಿಪ್ಪು ಮೂರ್ತಿ ಸ್ಥಾಪನೆ ಬಗ್ಗೆ ಮುಸಲ್ಮಾನರಲ್ಲಿ ಭರವಸೆ ಮೂಡಿಸಿ ಕೊಡಗಿನ ಕಾಂಗ್ರೆಸ್ ಅಭ್ಯರ್ಥಿಗಳು ಮತಗಳಿಕೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ. ಇಸ್ಲಾಮಿನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.


ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷ ಎಂ.ಎ.ಕಲೀಲ್ ಬಾಷ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಸಂದರ್ಭ ಸಾಧನೆಯ ಆಧಾರದಲ್ಲಿ ಮತಯಾಚನೆ ಮಾಡಬೇಕೆ ಹೊರತು ಭಾವನೆಗಳನ್ನು ಕೆಣಕಬಾರದು. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ವಿದ್ಯಾವಂತರು ಮತ್ತು ಪ್ರಜ್ಞಾವಂತರಾಗಿದ್ದು, ಪ್ರತಿಸ್ಪರ್ಧಿಗಳನ್ನು ಇಲ್ಲಿಯವರೆಗೆ ತೇಜೋವಧೆ ಮಾಡುವ ಕೀಳುಮಟ್ಟದ ರಾಜಕಾರಣವನ್ನು ಪ್ರದರ್ಶಿಸಿಲ್ಲ. ಬದಲಾವಣೆಗಾಗಿ ಮತಯಾಚಿಸುತ್ತಿದ್ದು, ಮತದಾರರು ಕೂಡ ಸೂಕ್ತ ಸ್ಪಂದನೆ ನೀಡುತ್ತಿದ್ದಾರೆ. ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣರವರು ಗೆಲ್ಲುವುದು ಖಚಿತ ಎನ್ನುವ ಮುನ್ಸೂಚನೆ ದೊರೆತ ಬೆನ್ನಲ್ಲೇ ಅಪ್ರಸ್ತುತ ವಿಚಾರಗಳನ್ನು ಚರ್ಚೆಗೆ ತೆಗೆದುಕೊಂಡು ಮತದಾರರ ಹಾದಿ ತಪ್ಪಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.


ಇಸ್ಲಾಮಿನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲದಿದ್ದರೂ ಟಿಪ್ಪು ಮೂರ್ತಿಯ ಕುರಿತು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಸುಳ್ಳು ಹೇಳಿ ಮತ ಸೆಳೆಯುವ ಬದಲು ತಾವುಗಳು ಇಷ್ಟು ವರ್ಷಗಳ ಕಾಲ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮೂಲಕ ಮತ ಪಡೆಯಲಿ ಎಂದು ಒತ್ತಾಯಿಸಿರುವ ಅವರು, ಅಪಪ್ರಚಾರದ ಮೂಲಕ ಭಾವನೆಗಳನ್ನು ಕೆಣಕುವವರ ವಿರುದ್ಧ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಬೇಕೆಂದು ಒತ್ತಾಯಿಸಿದ್ದಾರೆ.


ಬಿಜೆಪಿಯ ದೊಡ್ಡ ದೊಡ್ಡ ನಾಯಕರೇ ತಮ್ಮದಲ್ಲದ ಕ್ಷೇತ್ರಗಳಲ್ಲಿ ಚುನಾವಣೆಯನ್ನು ಎದುರಿಸಿದ ಅನೇಕ ಉದಾಹರಣೆಗಳಿವೆ. ತಮ್ಮೊಳಗಿನ ಹುಳುಕನ್ನು ಮುಚ್ಚಿಟ್ಟು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಬಿಜೆಪಿಯ ಹತಾಶ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಎಂ.ಎ.ಕಲೀಲ್ ಬಾಷ ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net