ದೇವಾಲಯಗಳ ಸಂರಕ್ಷಣೆಗೆ ಹೆಚ್ಚಿನ ಕಾಳಜಿವಹಿಸಿ

8 pnh 1
Published on

ಪಂಚನಹಳ್ಳಿ: ಧರ್ಮದ ಮೌಲ್ಯವನ್ನು ಗಟ್ಟಿಗೊಳಿಸಿದರೆ ದುಃಖದ ಸರಪಳಿಯಿಂದ ಹೊರಬಹುದು ಎಂದು ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದರು.

ಹುಳಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ವಿಮಾನಗೋಪುರ ಕಲಶಾರೋಹಣ ಮಹೋತ್ಸವದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿನ ಭಕ್ತಿಯ ದೇವರಿಗೆ ಮಾತ್ರ ಸೀಮಿತವಗದೆ ದೇವಾಲಯಗಳ ಸಂರಕ್ಷಣೆಗೂ ಹೆಚ್ಚಿನ ಕಾಳಜಿ ವಹಿಸಬೇಕು.ಧಾರ್ಮಿಕ ನಂಬಿಕೆಯಿಂದ ಒಗ್ಗಟ್ಟು ಮೂಡಿಸಿಕೊಳ್ಳಲು ಸಾಧ್ಯ ಎಂದರು.

ಮನಸ್ಸಿನ ಶಾಂತಿಗಾಗಿ ಪ್ರತಿ ಮನುಷ್ಯನು ಪ್ರಯತ್ನಿಸುತ್ತಾನೆ. ಈಗ ಸಿಕ್ಕಿರುವ ಸಂತೋಷ ಪಡೆಯುವಲ್ಲಿ ವಿಫಲವಾಗುತ್ತಿದ್ದಾನೆ. ಸಂತೋಷ ಮತ್ತು ನೆಮ್ಮದಿಯ ಬದುಕಿಗೆ ಧಾರ್ಮಿಕ ಕೇಂದ್ರಗಳು ಹೆಚ್ಚು ಸಹಕಾರಿಯಾಗಲಿವೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸನಾತನ ಧರ್ಮದ ಬೆಳವಣಿಗೆಯಲ್ಲಿ ಸಾಧು ಸಂತರ ಕೊಡುಗೆ ಅಪಾರವಾಗಿದೆ. ಧಾರ್ಮಿಕ ನಂಬಿಕೆಗಳ ಮೇಲೆ ನಾವೆಲ್ಲರೂ ಬದುಕು ಸಾಗಿಸುತ್ತಿದ್ದೇವೆ. ವೀರಭದ್ರೇಶ್ವರ ಸ್ವಾಮಿ ಗ್ರಾಮದಒಗ್ಗಟ್ಟು ಕಾಪಾಡಿಸಲು ಕಾಯುವ ದೈವನಾಗಿ ನೆಲೆಸಿ ನೆಮ್ಮದಿ ಕಲ್ಪಿಸಲಿ. ದೇವಾಲಯದ ನಿರ್ಮಾಣದ ಜತೆಗೆ ಪ್ರತಿನಿತ್ಯ ಪೂಜಾ ಅನುಷ್ಠಾನಗಳಿಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು.

ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ದೇವಾಲಯದ ಕಲಶಾರೋಹಣ ನೆರವೇರಿಸಿದರು. ಚಿತ್ರನಟ ರಂಗಾಯಣ ರಘು, ವಿಧಾನ ಪರಿಷತ್ ಸದಸ್ಯ ಧನಂಜಯ್ ಸರ್ಜಿ, ವೈಎಸ್‌ವಿ ದತ್ತ, ರೇಣುಕಾರಾಧ್ಯ, ಲಿಂಗಮೂರ್ತಿ, ಡಾ. ಮಲ್ಲಿಕಾರ್ಜುನ್, ಕಾಂತಮ್ಮ ಕೃಷ್ಣಮೂರ್ತಿ, ಮಂಗಳಾ, ಭಾಗ್ಯ ಸುರೇಶ್, ಸಂತೋಷ್, ಚಂದನ್, ಪರ್ವತ ಮಲ್ಲಪ್ಪ (ಬಾಬು) ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net