

ಬೆಂಗಳೂರು: ಬಿಬಿಎಂಪಿ ವತಿಯಿಂದ ಸ್ವಚ್ಛ ಹಾಗೂ ಹಸಿರು ಬೆಂಗಳೂರಿಗಾಗಿ ನಗರದ ಎಲ್ಲ ನಾಗರಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಲು ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮನವಿ ಮಾಡಿದ್ದಾರೆ.
ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನದ ಗೌರವಾರ್ಥ ಬೆಂಗಳೂರನ್ನು ಮತ್ತಷ್ಟು ಹಸಿರು ಮತ್ತು ಸ್ವಚ್ಚ ನಗರವನ್ನಾಗಿಸಲು ವಿನೂತನ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಸ್ವಚ್ಛತೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅ.2ರಂದು ವಿಧಾನಸೌಧದಲ್ಲಿ ಸ್ವಚ್ಛತಾ ಪ್ರತಿಜ್ಞೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲ್ಲಿ ನಗರದ ಎಲ್ಲ ನಾಗರಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲಿಕೆಯೊಂದಿಗೆ ಕೈಜೋಡಿಸಿ ಅ.1ರೊಳಗಾಗಿ ಪಾಲಿಕೆಯ ವೆಬ್ ಲಿಂಕ್ ಗೆ ಭೇಟಿ ನೀಡಿ ಸ್ವಚ್ಛತಾ ಪ್ರತಿಜ್ಙೆ ಸ್ವೀಕರಿಸಲು ಕೋರಿದ್ದಾರೆ.
ಪ್ರತಿಜ್ಙೆ ಸ್ವೀಕರಿಸುವ ಪ್ರತಿಯೊಬ್ಬರಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು. ಅತಿ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಶಾಲೆಗೆ ಡಿಸಿಎಂ ಪ್ರಶಸ್ತಿ ವಿತರಿಸಲಿದ್ದಾರೆ. ಜತೆಗೆ 5 ಅದೃಷ್ಟಶಾಲಿ ವಿದ್ಯಾರ್ಥಿಗಳಿಗೂ ವಿಶೇಷ ಬಹುಮಾನ ನೀಡಲಾಗುತ್ತದೆ.
ಆನ್‌ಲೈನ್ ಭಾಷಣ ಸ್ಪರ್ಧೆ ಆಯೋಜನೆ:
ಬಿಬಿಎಂಪಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆನ್‌ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ, ಬಿಬಿಎಂಪಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯ ಪುಟಕ್ಕೆ ಭೇಟಿ ನೀಡಿ ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನವನ್ನು ಪರಿಶೀಲಿಸಿ ಸೆ.28ರೊಳಗೆ ಅಪ್‌ಲೋಡ್ ಮಾಡಬಹುದಾಗಿದೆ.
ಭಾಷಣಾ ಸ್ಪರ್ಧೆಯ ವರ್ಗ, ವಿಷಯ ವಿವರ:
* ಪ್ರಾಥಮಿಕ ಶಾಲೆ (6- 8ನೇ ತರಗತಿ) ವಿದ್ಯಾರ್ಥಿಗಳಿಗೆ: ಹಸಿರು ಸ್ಥಳಗಳು ಮತ್ತು ನಗರ ಸ್ವಚ್ಛತೆಯಲ್ಲಿ ಅವುಗಳ ಪಾತ್ರ.
* ಪ್ರೌಢಶಾಲೆ (9, 10ನೇ ತರಗತಿ) ವಿದ್ಯಾರ್ಥಿಗಳಿಗೆ: ನಮ್ಮ ನಗರವನ್ನು ಪರಿವರ್ತನೆಗೊಳಿಸುವಲ್ಲಿ ಸ್ವಚ್ಛ ಮತ್ತು ಹಸಿರಾಗಿಸುವಲ್ಲಿ ಯುವಜನರ ಶಕ್ತಿ.