ಆರೋಗ್ಯದ ಕಾಳಜಿ ವಹಿಸಿ

26 vikram 14
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದು ಒತ್ತಡದ ಜೀವನದಲ್ಲಿ ನಮ್ಮ ಆರೋಗ್ಯ ನಿರ್ಲಕ್ಷಿಸುತ್ತಿದ್ದೇವೆ. ಆರೋಗ್ಯದ ಕಾಳಜಿ ಜತೆಗೆ ನಮ್ಮ ಭವಿಷ್ಯದ ಮಕ್ಕಳಿಗೆ ಸಮಯ ಪಾಲನೆ ಮತ್ತು ಒಳ್ಳೆ ಸಂಸ್ಕಾರದ ಅರಿವು ಮೂಡಿಸುವಲ್ಲಿ ಪಾಲಕರು ಗಮನಹರಿಸುವ ಅಗತ್ಯವಿದೆ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಆಶ್ರಯದಲ್ಲಿ ಉತ್ತರಾದಿಮಠ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2025 ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ಎಚ್​.ಎ. ಕಟ್ಟಿ ಮಾತನಾಡಿ, ಸಂಗೀತ ಕೇಳುವುದು ಮತ್ತು ಅದರ ಇಂಪಿನಿಂದ ರೋಗಿಗಳು ಗುಣವಾಗಿದ್ದನ್ನು ಕಾಣಬಹುದು. ಸಂಗೀತಕ್ಕೆ ಒಂದು ಸತ್​ ಪರಂಪರೆ ಇದೆ. ಸಂಗೀತ ಆಲಿಸುವುದರಿಂದ ಆರೋಗ್ಯ ಸುಧಾರಣೆ ಮತ್ತು ಮನಸ್ಸು ಹಗುರವಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ಅಧ್ಯಾತ್ಮಿಕ ಆಚರಣೆ, ಹಿರಿಯರ, ಗುರುಗಳ ಹಾಗೂ ಹರಿದಾಸರು ತಮ್ಮ ಕೃತಿಗಳಲ್ಲಿ ನೀಡಿದ ನೀತಿ ಪಾಠವನ್ನು ಎಲ್ಲ ಮಕ್ಕಳಿಗೆ ತಿಳಿಸಬೇಕು. ಅಂದಾಗಲೇ ಅವರಲ್ಲಿ ಉತ್ತಮ ಗುಣ ಬೆಳೆದು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಹಿರಿಯ ನ್ಯಾಯವಾದಿ ಕೆ.ಎಲ್​. ಪಾಟೀಲ, ಶ್ರೀಕಾಂತ ಪಾಟೀಲ ಮಾತನಾಡಿದರು. ಶ್ರೀ ಹರಿದಾಸರು ರಚಿಸಿದ ವಿನಾಯಕನ ಹಾಡುಗಳ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ಭಜನಾ ಮಂಡಳಗಳು ಭಾಗವಹಿಸಿದ್ದವು. ಧಾರವಾಡದ ವಿಜಯ ವಿಠ್ಠಲ ಭಜನಾ ಮಂಡಳಿ ಪ್ರಥಮ ಸ್ಥಾನದೊಂದಿಗೆ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪಡೆಯಿತು. ತುಂಗಭದ್ರಾ ಮಹಿಳಾ ಮಂಡಳ (ದ್ವಿ), ತೇಜಸ್ವಿನಿ ಭಜನಾ ಮಂಡಳ (ತೃ) ಹಾಗೂ ದೇಸಾಯಿಗಲ್ಲಿಯ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ, ಕಾಮನಕಟ್ಟಿಯ ರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿಗಳು ಸಮಾಧಾನಕರ ಬಹುಮಾನ ಪಡೆದವು.

ಭಾಗವಹಿಸಿದ ಎಲ್ಲ ಭಜನಾ ಮಂಡಳಗಳಿಗೆ ಎಸ್​ಡಿಎಂ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕೃತಿಕಾ ಗುತ್ತಲ ಪ್ರಮಾಣ ಪತ್ರ ವಿತರಿಸಿದರು. ಸ್ಪರ್ಧೆ ನಿರ್ಣಾಯಕರಾಗಿ ಆಕಾಶವಾಣಿ ಕಲಾವಿದ ಡಾ. ಅನೀಲ ಮೇತ್ರಿ, ಹಿರಿಯ ಸಂಗೀತ ಕಲಾವಿದ ವಾದಿರಾಜ ನಿಂಬರಗಿ ಆಗಮಿಸಿದ್ದರು.

ಬಸವಪ್ರಭು ಹೊಸಕೇರಿ, ಗುರು ಹಿರೇಮಠ, ಸತೀಶ ತುರಮರಿ, ಶಿವಪುತ್ರ ರಾಚಯ್ಯನವರ, ಆರ್​.ಬಿ. ಗುತ್ತಲ, ಜಿ.ಎನ್​. ತೊರಗಲ್ಲಮಠ, ಜಿ.ಎಲ್​. ಪಾಟೀಲ, ಡಿ.ಎಂ. ಸಿಂಧಗಿ, ಇತರರು ಇದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಎಸ್​.ಬಿ. ಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಾ ಚಿಕ್ಕೇರೂರ ನಿರ್ವಹಿಸಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net