

ವಿಜಯಪುರ: ಇಲ್ಲಿನ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಗ್ಲುಕೋಮಾ ಅರಿವು ಸಪ್ತಾಹ ನಡೆಯಿತು.
ಗ್ಲುಕೋಮಾ ರೋಗದ ತಜ್ಞೆ ಡಾ.ಕವಿತಾ ಮಾತನಾಡಿ, ಯಾವುದೇ ಮುನ್ಸೂಚನೆ ನೀಡದೆ ಗ್ಲುಕೋಮಾ ರೋಗ ಉಲ್ಬಣಗೊಂಡು ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ಕಣ್ಣಿನ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ನೇತ್ರಗಳನ್ನು ಮೇಲಿಂದ ಮೇಲೆ ಸೂಕ್ತ ತಪಾಸಣೆ ಮಾಡಿಸುವ ಮೂಲಕ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಟಕದ ಚೇರ್ಮನ್ ಶರದ ರೊಡಗಿ ಮಾತನಾಡಿ, ಕ್ರಮಬದ್ಧ ಜೀವನ ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಗ್ಲುಕೋಮಾ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು.
ಶಿಬಿರದಲ್ಲಿ 15ಕ್ಕೂ ಅಧಿಕ ನೇತ್ರ ತಜ್ಞರು ಭಾಗವಹಿಸಿದ್ದರು. ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ. ಮಾಲಿನಿ ಪಾಟೀಲ ಮತ್ತು ಡಾ. ಸಂತೋಷ ಪಾಟೀಲ ಇದ್ದರು. ರೆಡ್ ಕ್ರಾಸ್ ಸಂಸ್ಥೆ ಪದಾಧಿಕಾರಿಗಳಾದ ಡಾ. ಭಕ್ತಿ ತಾತುಸ್ಕರ, ಶಿವಾನಂದ ಹತ್ತರಕಿ, ಪ್ರಕಾಶ ಮಠ ಮತ್ತಿತರರಿದ್ದರು.