

ಸವದತ್ತಿ: ಸರ್ಕಾರಿ ಕಚೇರಿಯಲ್ಲಿ ಜನತೆಗೆ ಜಿಗುಪ್ಸೆಯಾಗದಂತೆ ಬಡ, ಅಸಹಾಯಕರ ಸಮಸ್ಯೆ ಕುರಿತು ಕಾಳಜಿ ವಹಿಸಿ ಕೆಲಸ ನಿರ್ವಹಿಸಿ ಎಂದು ಲೋಕಾಯುಕ್ತ ಎಸ್.ಪಿ. ಹನುಮಂತರಾಯ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಬೆಳಗಾವಿ ಲೋಕಾಯುಕ್ತರಿಂದ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕು ಮಟ್ಟದಲ್ಲಿ ಆಗುವ ಕಚೇರಿ ಕಾರ್ಯವನ್ನು ಇಲ್ಲಿಯೇ ಬಗೆಹರಿಸಲು ಆದ್ಯತೆ ನೀಡಿ. ಸಮಯ ವ್ಯರ್ಥವಾಗಿ ಆರ್ಥಿಕ ಸಂಕಷ್ಟ ಎದುರಿಸುವ ಬಡವರಿಗೆ ಇದು ಹೊರೆಯಾಗುತ್ತದೆ. ಜನರ ಸಮಸ್ಯೆಗೆ ಸ್ಪಂದಿಸಲೆಂದು ಪ್ರತಿ 2ನೇ ಬುಧವಾರ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು, ಸಭೆ ನಡೆಸಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಅಕಾರಿಗಳಿಂದ ಕೆಲಸಕ್ಕಾಗಿ ಹಣ ಬೇಡಿಕೆ ಇದ್ದಲ್ಲಿ ಸಾರ್ವಜನಿಕರು ನೇರವಾಗಿ ಲೋಕಾಯುಕ್ತ ಕಚೇರಿಗೆ ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ದಲಿತ ಮುಖಂಡ ಫಕೀರಪ್ಪ ಭೋವಿ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ ನೀಡಲಾಗಿರುವ ಕಿಟ್ ವಿತರಣೆ ಮತ್ತು ವಿವಿಧ ಯೋಜನೆಗಳಲ್ಲಿ ತಾರತಮ್ಯ ನಡೆಯುತ್ತಿದೆ. 60 ಸಾವಿರಕ್ಕೂ ಅಕ ಕಾರ್ಮಿಕರಿದ್ದು, ಕೇವಲ 140 ಕಿಟ್ ಮಾತ್ರ ವಿತರಣೆಯಾಗಿವೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಎಸ್‌ಪಿ ಹನುಮಂತರಾಯ, ಅಕಾರಿಗೆ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲು ಸೂಚಿಸಿ, ಜಿಲ್ಲಾ ಕಾರ್ಮಿಕ ಅಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ವಕೀಲ ಬಸವರಾಜ ತಳವಾರ ಮಾತನಾಡಿ, ಯಲ್ಲಮ್ಮ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ವೇತನ ಸಮಸ್ಯೆ ಪರಿಹರಿಸಲು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಹನುಮಂತರಾಯ, ನ್ಯಾಯಾಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿದ್ದರೆ ಅದು ಬಗೆಹರೆಯುವವರೆಗೂ ತಾತ್ಕಾಲಿಕ ಪರಿಹಾರ ನೀಡಿರುತ್ತಾರೆ. ಸಂಬಂಸಿದ ವಕೀಲರನ್ನು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಿ ಎಂದರು.
ಲೋಕಾಯುಕ್ತ ಡಿವೈಎಸ್‌ಪಿಗಳಾದ ಜೆ. ರಘು, ಬಿ.ಎಸ್. ಪಾಟೀಲ, ಭರತ ರಡ್ಡಿ, ಇನ್ಸ್‌ಪೆಕ್ಟರ್‌ಗಳಾದ ಅನ್ನಪೂರ್ಣಾ ಹುಲಗೂರ, ಎ.ಎಫ್. ಕಲಾದಗಿ, ತಾಪಂ ಇಒ ಯಶವಂತಕುಮಾರ, ಜಿ.ಬಿ. ಜಕ್ಕನಗೌಡ್ರ, ಮಲ್ಲಯ್ಯ ಕಂಬಿ, ಎಂ.ವಿ ಗುಂಡಪ್ಪಗೋಳ, ಪಿಐ ಕರುಣೇಶಗೌಡ ಜೆ., ಅಬಕಾರಿ ಸಿಪಿಐ ಶ್ರೀಶೆಲ ಅಕ್ಕಿ, ಸಿಡಿಪಿಒ ಸುನಿತಾ ಪಾಟೀಲ, ಪಿ.ಎಂ.ಚನ್ನಪ್ಪನವರ, ಲಿಂಗರಡ್ಡಿ ಮಂಕಣಿ ಇತರರು ಇದ್ದರು.