

ಕೆ.ಎಂ.ದೊಡ್ಡಿ: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ವತಿಯಿಂದ ಹೃದಯ ಕುರಿತು ಜನ ಜಾಗೃತಿ ಜಾಥಾ ಜರುಗಿತು.
ಶನಿವಾರ ಭಾರತೀ ಎಜುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀ ಹೆಲ್ತ್ ಸೈನ್ಸ್‌ನ್ಸ್ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಜಾಥಾ ಕೈಗೊಳ್ಳಲಾಗಿತ್ತು. ಈ ವೇಳೆ ಹೃದಯ ಮಾದರಿಯ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಹೃದಯ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.
ಜಾಥಾಕ್ಕೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಕಲುಷಿತ ಆಹಾರ ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮೂಲಕ ಹೃದಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಹೃದಯ ರೋಗಕ್ಕೆ ತುತ್ತಾದವರು ತಮ್ಮ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದಾಗಿದ್ದು, ವೈದ್ಯರ ಸಲಹೆಯಂತೆ ಅಗತ್ಯ ಚಿಕಿತ್ಸೆ ಪಡೆಯಬೇಕು. ಉತ್ತಮ ಆರೋಗ್ಯಕ್ಕಾಗಿ ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ. ರೋಗಪೀಡಿತರು ಹಾಗೂ ಸಾಮಾನ್ಯರು ತಮ್ಮ ಬದುಕಿನಲ್ಲಿ ಪಾಲಿಸಲೇಬೇಕಾದ ದೈನಂದಿನ ಚಟುವಟಿಕೆಗಳು ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕ್ರೀಡಾ ಚಟುವಟಿಕೆ, ಯೋಗ, ವ್ಯಾಯಾಮದಿಂದ ರೋಗಮುಕ್ತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು, ಯುವ ಸಮುದಾಯ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಬಳಿಕ ಆಸ್ಟರ್ ಜಿ.ಮಾದೇಗೌಡ ಆಸ್ಪತ್ರಯ ಯೂನಿಟ್ ಮುಖ್ಯಸ್ಥ ಪಿ.ಎಸ್.ಗಣೇಶ್ ಪ್ರಭು ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷೆ ಕೌಶಲ್ಯಾ ಅರ್ಕೇಶ್, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಪುಟ್ಟರಾಮು, ವಿನಯ್ ಹೊನ್ನೇಗೌಡ, ರಾಘವೇಂದ್ರ, ಸುರ್ವಣಾ, ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್, ಭಾರತೀ ಹೆಲ್ತ್ ಸೈನ್ಸ್‌ನ್ಸ್ ನಿರ್ದೇಶಕ ಡಾ.ತಮಿಜ್ ಮಣಿ, ಪ್ರಾಂಶುಪಾಲರಾದ ಡಾ.ಮಂಜುಜೇಕಬ್, ಡಾ.ಕಲಾಶ್ರೀ, ಡಾ.ಮಹೇಂದ್ರಕುಮಾರ್, ಪಿಡಿಒ ಸುಧಾ, ಆಸ್ಪತ್ರೆಯ ಸಿಬ್ಬಂದಿ ಜೆ.ಭರತ್, ಮಲ್ಲೇಶ್, ಅಣ್ಣೂರು ರಾಜು ಸೇರಿದಂತೆ ಇತರರು ಇದ್ದರು.