

ಉಡುಪಿ: ಕೆಲವು ಜಿಲ್ಲೆಗಳಲ್ಲಿ ಕೋಳಿ ಶೀತ ಜ್ವರ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋಳಿ ಶೀತ ಜ್ವರದ ಕಣ್ಗಾವಲಿನ ಕ್ರಮ ಕೈಗೊಳ್ಳುವ ಸರ್ವೇಕ್ಷಣಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಳಿಶೀತ ಜ್ವರ ಈಗಾಗಲೇ ಮೈಸೂರು ಮತ್ತು ದಾವಣಗೆರೆಯಲ್ಲಿ ಕಂಡು ಬಂದಿದ್ದು, ಜಿಲ್ಲೆಯ ಕೋಳಿ ಮಾರಾಟಗಾರರು, ಈ ಜಿಲ್ಲೆಗಳಿಂದ ಕೋಳಿ ತರಿಸದಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಕೋಳಿ ಸಾಕಣೆ ಕೇಂದ್ರಗಳು, ಕೋಳಿ ಮಾಂಸ ಮಾರಾಟ ಕೇಂದ್ರಗಳು ಹಾಗೂ ಕೋಳಿ ಸಾಗಾಟ ವಾಹನಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಮಾಲೀಕರು ಕೋಳಿ ಫಾರ್ಮ್ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಅಲ್ಲಿನ ಕಾರ್ಮಿಕರು ಅಗತ್ಯ ಸುರಕ್ಷಾ ವಸ್ತ್ರಗಳನ್ನು ಧರಿಸುವಂತೆ ಸೂಚಿಸಿದರು. ಕೋಳಿ ಸಾಕಣೆದಾರರಿಗೆ, ಫಾರ್ಮ್ ಮಾಲೀಕರಿಗೆ, ಕೆಲಸಗಾರರಿಗೆ, ಪಕ್ಷಿಧಾಮಗಳ ಹತ್ತಿರವಿರುವ ಸಾರ್ವಜನಿಕರಿಗೆ ಹಾಗೂ ರೈತರಿಗೆ ಹಕ್ಕಿ ಜ್ವರ ಮುನ್ನೆಚ್ಚರಿಕೆ ನೀಡಿ ಅಗತ್ಯ ಅರಿವು ಮೂಡಿಸಲಾಗುವುದು ಎಂದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಹರೀಶ್ ತಾಮನಕರ್ ಜಿಲ್ಲಾಧಿಕಾರಿಗೆ ಇಲಾಖೆ ವರದಿ ನೀಡಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್‌ಚಂದ್ರ ಸೂಡ ಇದ್ದರು.