

ಕುಂದಗೋಳ: ರೈತರು ಬೆಳೆಗೆ ಒಳ್ಳೆಯ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರ ಆರಂಭಿಸಿದೆ. ಇದರ ಸದುಪಯೋಗವನ್ನು ರೈತರು ಪಡೆಯಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಹಾಗೂ ನಾಫೆಡ್ ಸಂಸ್ಥೆಯ ಹೆಸರು ಕಾಳು ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಹೆಸರು ಖರೀದಿ ಆರಂಭಿಸಲಿದೆ ಎಂಬ ಸುದ್ದಿ ಕೇಳಿ ಮಾರುಕಟ್ಟೆಯಲ್ಲಿ ದರ 800 ರೂಪಾಯಿ ಹೆಚ್ಚಾಗಿದೆ. ಇದರಿಂದ ರೈತರಿಗೂ ಅನುಕೂಲ ಆಗಿದೆ. ತಾಲೂಕಿನ ಯರಗುಪ್ಪಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಎಪಿಎಂಸಿ ಗೋದಾಮಿನಲ್ಲಿ ಹಾಗೂ ಯಲಿವಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೆಸರು ಖರೀದಿ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಕುಂದಗೋಳ ಕೇಂದ್ರದಲ್ಲಿ 186 ಹಾಗೂ ಯಲಿವಾಳದಲ್ಲಿ 241 ರೈತರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿಗೆ ಅ. 7ವರೆಗೆ ಅವಕಾಶ ಇದೆ ಎಂದರು.
ರೈತರು ಶೇ. 12ರಷ್ಟು ತೇವಾಂಶ ಇರುವ ಹಾಗೆ ಹೆಸರು ಕಾಳನ್ನು ಒಣಗಿಸಿ ತಂದು ಮಾರಾಟ ಮಾಡಬೇಕು. ಸರ್ಕಾರ ರೈತರಿಂದ ಖರೀದಿಸಿದ ಹೆಸರು ಕಾಳನ್ನು ಶೇಖರಿಸಿಡಲು ತೊಂದರೆ ಆಗಬಾರದೆಂಬ ಉದ್ದೇಶದಿಂದ ಶೇ. 12ರಷ್ಟು ತೇವಾಂಶ ನಿಗದಿ ಮಾಡಿದೆ ಎಂದರು.
ತಹಸೀಲ್ದಾರ್ ರಾಜು ಮಾವರಕ ಮಾತನಾಡಿ, ಸರ್ಕಾರ ಉದ್ದಿಗೆ ಪ್ರತಿ ಕ್ವಿಂಟಾಲ್ಗೆ 7400 ರೂಪಾಯಿ, ಸೋಯಾಬೀನ್‌ಗೆ ಪ್ರತಿ ಕ್ವಿಂಟಾಲ್ಗೆ 4892 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದೆ. ಇದರ ನೋಂದಣಿ ಶೀಘ್ರದಲ್ಲೇ ಆರಂಭವಾಗುತ್ತದೆ. ಆದ್ದರಿಂದ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಹೆಬಸೂರ, ಫೆಡರೇಷನ್ ವ್ಯವಸ್ಥಾಪಕ ವಿನಯ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಎಚ್. ಎಂ. ವಿದ್ಯಾಶ್ರೀ, ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ, ಪಿ.ಎಸ್. ಮಾಂತವಡೆಯರ, ಮಾಲತೇಶ ಶ್ಯಾಗೋಟಿ, ನಾಗನಗೌಡ ಸಾತ್ಮಾರ, ಸತೀಶ ಪಾಟೀಲ, ನಾಗರಾಜ ಶಿಬಾರಗಟ್ಟಿ, ಸಿದ್ದು ಧಾರವಾಡಶೆಟ್ಟರ್, ರೈತರು ಇದ್ದರು.