

ಸುಂಟಿಕೊಪ್ಪ: ಕೊಡಗು ಜಿಲ್ಲಾ ಲೀಡ್ ಬ್ಯಾಂಕ್, ವಾಲ್ನೂರು ಯೂನಿಯನ್ ಬ್ಯಾಂಕ್, ವಾಲ್ನೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ವಾಲ್ನೂರು ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವ ಮೂಲಕ ಅದರ ಪ್ರಯೋಜನ ಪಡೆದುಕೊಳ್ಳಬೇಕು. ಮುಖ್ಯವಾಗಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಪಘಾತ ವಿಮೆಯಾಗಿದ್ದು, ವಾರ್ಷಿಕ 20 ರೂ. ಪಾವತಿಸಿದ್ದಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಾಗ 2 ಲಕ್ಷ ರೂ. ವರೆಗೆ ವಿಮಾ ಮೊತ್ತ ಸಿಗಲಿದೆ. ಅಲ್ಲದೆ ವಾರ್ಷಿಕವಾಗಿ 436 ರೂ. ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ನಾಮಿನಿಗೆ 2 ಲಕ್ಷ ರೂ. ವಿಮಾ ಮೊತ್ತ ಸಿಗಲಿದೆ. ಈ ಎರಡನ್ನೂ ಮಾಡಿಸಿಕೊಂಡಲ್ಲಿ ರೂ.4 ಲಕ್ಷ ರೂ.ವರೆಗೆ ವಿಮಾ ಮೊತ್ತ ಸಿಗಲಿದೆ ಎಂದು ಮಾಹಿತಿ ನೀಡಿದರು.
60 ವರ್ಷದ ನಂತರದಲ್ಲಿ 1000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ಹಣ ಸಿಗಬೇಕಾದರೆ ತಕ್ಷಣವೇ ಅಟಲ್ ಪಿಂಚಣಿ ಯೋಜನೆ ಮಾಡಿಸುವಂತೆ ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರಿ ಅಲೋಕ್ ಸಿನ್ಹ ಮಾತನಾಡಿ, ಪ್ರತಿಯೊಬ್ಬರೂ ರೀ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು ಎಂದು ಸಲಹೆ ನೀಡಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ನಬಾರ್ಡ್‌ನ ಆರ್ಥಿಕ ನೆರವಿನೊಂದಿಗೆ ಜಿಲ್ಲೆಯಲ್ಲಿ ಅವಾರ್ಡ್ ಸಂಸ್ಥೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತಿ ತಾಲೂಕಲ್ಲಿ ಮಾಡುತ್ತಿದೆ. ಇದರ ಮುಖ್ಯ ಉದ್ದೇಶ ಸಾಮಾಜಿಕ ಭದ್ರತಾ ಯೋಜನೆ ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಜಮಾಗಳ ಬಗ್ಗೆ ಮಾಹಿತಿ ನೀಡುವುದಾಗಿದೆ ಎಂದು ಆರ್ಥಿಕ ಸಮಾಲೋಚಕ ನಬಿ ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನು ಮಹೇಶ್, ಪಿಡಿಒ ಮೇದಪ್ಪ ಮಾತನಾಡಿದರು. ಅಧ್ಯಕ್ಷ ಮತಿ ಮಂಜುಳಾ, ಉಪಾಧ್ಯಕ್ಷ ಮನು ಮಹೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯ್ಕ ಇತರರಿದ್ದರು.