ಕಾಯಕ ಬಂಧು ಯೋಜನೆ ಸದುಪಯೋಗ ಪಡೆಯಿರಿ

Kayaka Bandhu Inaguration
Published on

ಜೊಯಿಡಾ: ತಾಲೂಕಿನಲ್ಲಿ ಭತ್ತ ಬೆಳೆದು ಆರ್ಥಿಕವಾಗಿ ಅಭಿವೃದ್ಧಿಯಾಗುವುದು ಕಷ್ಟ. ಇಲ್ಲಿನ ರೈತರಿಗೆ ಭೂಮಿ ಕೂಡಾ ಕಡಿಮೆ ಇದೆ. ಹಾಗಾಗಿ ಕಾಯಕ ಬಂಧು ಯೋಜನೆಯ ಸದುಪಯೋಗ ಪಡೆದುಕೊಂಡು ರೈತರ ಸ್ವಾವಲಂಬಿಗಳಾಗಬೇಕು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಜೊಯಿಡಾದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕಾಯಕ ಬಂಧು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜನ ಸಂಖ್ಯೆಯಲ್ಲಿ ಕಡಿಮೆ ಇರುವ ತಾಲೂಕು ಜೊಯಿಡಾ. ಅಭಿವೃದ್ಧಿ ಬಗ್ಗೆ ಅತಿಯಾದ ನಿರೀಕ್ಷೆ ಇಲ್ಲಿನ ಜನರಲ್ಲಿದೆ. ಅದಕ್ಕೆ ಸ್ಪಂದಿಸುವ, ಕೆಲಸ ಕಾರ್ಯಗಳನ್ನು ಮಾಡುವಲ್ಲಿ ನಾನು ಪ್ರಯತ್ನಿಸುತ್ತೇನೆ. ದುಡಿಯುವಂಥ ಕೈಗಳಿಗೆ ಕೆಲಸ ಕೊಡುವ ಸಲುವಾಗಿ ಕೇಂದ್ರ ಸರಕಾರ ಈ ಉದ್ಯೋಗ ಖಾತ್ರಿ ಯೋಜನೆ ತಂದಿದೆ. ಗ್ರಾಮಿಣ ಭಾಗದಲ್ಲಿ ದುಡಿಯುವ ಅವಕಾಶ ಹೆಚ್ಚಿಗೆ ಸಿಕ್ಕಿರುವ ಕಾರಣ ಇದರ ಸದುಪಯೋಗವನ್ನು ತೆಗೆದುಕೊಳ್ಳಬೇಕು ಎಂದರು.

ಗ್ರೀನ್ ಇಂಡಿಯಾ ಸಂಸ್ಥೆಯ ಬಿ.ಪಿ ಮಹೇಂದ್ರಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜೊಯಿಡಾ ಗ್ರಾ.ಪಂ. ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ನಂದಿಗದ್ದಾ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ಗೊಸಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ತಾ.ಪಂ ಇಓ ಭಾರತಿ ಎಂ., ತಹಸೀಲ್ದಾರ್ ಮಂಜುನಾಥ ಮುನ್ನೊಳಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net