

ಕುಮಟಾ: ತಾಲೂಕಿನ ಮಿರ್ಜಾನ, ಕೋಡ್ಕಣಿ, ಬರ್ಗಿ ಹಾಗೂ ದೀವಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ಯೋಜನೆಯ 82 ಫಲಾನುಭವಿಗಳಿಗೆ ಮಿರ್ಜಾನಿನ ರಾಮಕ್ಷತ್ರಿಯ ಸಭಾಭವನದಲ್ಲಿ ಶಾಸಕ ದಿನಕರ ಶೆಟ್ಟಿ ಸೋಮವಾರ ಕಾರ್ಯಾದೇಶ ಪತ್ರಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಸೂಕ್ತ ವಸತಿ ವ್ಯವಸ್ಥೆ ಇಲ್ಲದ ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ನೀಡಲಾಗಿತ್ತು.
ಆಗ ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 2,000 ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು. ಇದಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಂದಿನ ವಸತಿ ಸಚಿವ ವಿ. ಸೋಮಣ್ಣ ಅವರು ಸ್ಮರಣೀಯರು. ಫಲಾನುಭವಿಗಳೆಲ್ಲರೂ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿ ಯೋಜನೆಯಲ್ಲಿ ಅತಿಹೆಚ್ಚು ಮನೆಗಳು ಮಂಜೂರಾಗಿದ್ದು, ವಸತಿರಹಿತರಿಗೆ ಇದರಿಂದ ಅನುಕೂಲವಾಗಿದೆ. ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಸರ್ಕಾರದ ನಿಯಮನುಸಾರ ಮನೆಯನ್ನು ನಿರ್ವಿುಸಿ ಎಂದು ಫಲಾನುಭವಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ವರ ಪಟಗಾರ, ರಾಜೇಶ ಪಟಗಾರ, ವಿಶಾಲಾಕ್ಷಿ ಪಟಗಾರ, ನಾಗವೇಣಿ ಅಂಬಿಗ, ಉಪಾಧ್ಯಕ್ಷರಾದ ಸೀತಾ ಭಟ್, ದೇವಿ ಮುಕ್ರಿ, ಭಾರತಿ ಹರಿಕಾಂತ, ತಾಪಂ ಸಹಾಯಕ ಲೆಕ್ಕಾಧಿಕಾರಿ ನಾರಾಯಣ ಪಟಗಾರ, ಪಂಚಾಯಿತಿ ಸದಸ್ಯರು ಹಾಗೂ ಪಿಡಿಒಗಳು ಇದ್ದರು.