ಗೋಣಿಕೊಪ್ಪಲು: ಬಾಳೆಲೆ ಆರೋಗ್ಯ ಕೇಂದ್ರದ ವಿಷಯವಾಗಿ ಬಾಳೆಲೆ ಕೊಡವ ಸಮಾಜ ಸಭಾಂಗಣದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ನೇತೃತ್ವದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಸಲಾಯಿತು.
ಆರೋಗ್ಯ ಕೇಂದ್ರದ ಸಮಸ್ಯೆಗಳ ಬಗ್ಗೆ ವೈದ್ಯಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿದ ಶಾಸಕ ಪೊನ್ನಣ್ಣ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಆರೋಗ್ಯ ಕೇಂದ್ರದಲ್ಲಿನ ಹಲವು ನ್ಯೂನ್ಯತೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದ ಶಾಸಕರು, ರೋಗಿಗಳಿಗೆ ಆಗುತ್ತಿರುವ ಅನನುಕೂಲಗಳ ಬಗ್ಗೆ ತಮಗೆ ಬಂದ ದೂರಿನ ವಿಷಯಗಳ ಕುರಿತು ಹೇಳಿದರು. ಇವುಗಳನ್ನು ಸರಿಪಡಿಸಲು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಆರೋಗ್ಯ ಕೇಂದ್ರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಆರೋಗ್ಯ ಕೇಂದ್ರದ ಸಿಬ್ಬಂದಿ ಆರೋಗ್ಯ ಸಂಬಂಧಿತ ವಿಷಯದಲ್ಲಿ ಅತ್ಯಂತ ಗಂಭೀರವಾಗಿ ಕೆಲಸ ಮಾಡಬೇಕು. ರೋಗಿಗಳಿಗೆ ಸ್ಪಂದಿಸಲು ಯಾವಾಗಲೂ ಮುಂಚೂಣಿಯಲ್ಲಿ ಇರಬೇಕೆಂದು ಕರೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷ ವಿನು ಉತ್ತಪ್ಪ, ಮಾಯಾಮುಡಿ ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ಬಾನಂಡ ಪೃಥ್ವಿ, ಅರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.