

ಭಟ್ಕಳ: ಜನರ ಆರೋಗ್ಯದ ದೃಷ್ಟಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ದೈಮನೆ ಹೇಳಿದರು.
ಪಟ್ಟಣದ ಶಿರಾಲಿಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ಭವ ಹಾಗೂ ಆರೋಗ್ಯ ಶಿಬಿರ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ದೈಮನೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಿರಾಲಿ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಬಾಲಚಂದ್ರ ಮೇಸ್ತ ಮಾತನಾಡಿ, ಪ್ರತಿ ಹಳ್ಳಿಗಳ ಉಪಕೇಂದ್ರಗಳಲ್ಲಿ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ರಕ್ತದೊತ್ತಡ, ಮಧುಮೇಹ, ತಾಯಿ ಮತ್ತು ಮಕ್ಕಳ ಆರೋಗ್ಯ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡು ಕಾರ್ಯ ನಡೆಯಲಿದೆ ಎಂದರು.
ಭಟ್ಕಳ ತಾಲೂಕಾಸ್ಪತ್ರೆ ವೈದ್ಯ ಡಾ. ಲಕ್ಷ್ಮೀಶ ನಾಯ್ಕ ಆರೋಗ್ಯದ ಬಗ್ಗೆ ವಿವರವಾಗಿ ತಿಳಿಸಿದರು. ಭಟ್ಕಳ ತಾಲೂಕಾಸ್ಪತ್ರೆಯ ಸರ್ಜನ್ ಡಾ. ಅರುಣಕುಮಾರ, ಚರ್ಮರೋಗ ತಜ್ಞ ಡಾ. ಉಮೇಶ ತಳವಾರ, ಮಕ್ಕಳ ತಜ್ಞ ಡಾ. ಗಿರೀಶಕುಮಾರ ಚಡಗ, ಅರಿವಳಿಕೆ ತಜ್ಞೆ ಡಾ. ಹೇಮಾವತಿ ಹೆಬ್ಳೆ ಇತರರಿದ್ದರು. ಶಿರಾಲಿಯ ಗ್ರಾಮ್ ಒನ್ ಸಿಬ್ಬಂದಿ ಶಿವರಾಮ ದೇವಾಡಿಗ ಸಾರ್ವಜನಿಕರರಿಗೆ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಕೊಟ್ಟರು. ಆರೋಗ್ಯ ನಿರೀಕ್ಷಣಾಧಿಕಾರಿ ರಾಮಪ್ಪ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಮಾನಸ ವಂದನಾರ್ಪಣೆ ಮಾಡಿದರು.