ಉಚಿತ ಆರೋಗ್ಯ ಶಿಬಿರದ ಲಾಭ ಪಡೆದುಕೊಳ್ಳಲಿ

kmt_Arogya
Published on

ಕುಮಟಾ: ನಮ್ಮ ಆರೋಗ್ಯ ನಮ್ಮದೇ ಜವಾಬ್ದಾರಿ. ಆರೋಗ್ಯ ಸಂರಕ್ಷಣೆಗಾಗಿ ನಾವು ಉತ್ತಮ ಆರೋಗ್ಯ ಸೌಕರ್ಯ ಇರುವ ಕಡೆಗೆ ಹೋಗಬೇಕಾಗುತ್ತದೆ. ಅಂತಹ ಆರೋಗ್ಯ ಸೌಕರ್ಯವನ್ನು ಸಾರ್ವಜನಿಕರಿಗಾಗಿ ಲಯನ್ಸ್ ಕ್ಲಬ್​ನವರು ಉಚಿತ ಶಿಬಿರದ ರೂಪದಲ್ಲಿ ಪಟ್ಟಣದಲ್ಲಿ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಹೇಳಿದರು.

ಪಟ್ಟಣದ ಗಿಬ್ ಸಭಾಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಮಂಗಳೂರಿನ ಎಜೆ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಮೆಗಾ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದವರು ಉತ್ತರ ಕನ್ನಡದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವುದರಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗಿದೆ. ಸಾರ್ವಜನಿಕರು ಶಿಬಿರದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.

ಎಜೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಂಕುರ್ ಸಾವಂತ್ ಮಾತನಾಡಿ, ಎಜೆ ಹಾಸ್ಪಿಟಲ್​ನ ಖ್ಯಾತ ವೈದ್ಯರು ಆಗಮಿಸಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಹೃದಯರೋಗ ವಿಭಾಗ, ಸಾಮಾನ್ಯ ಔಷಧ ವಿಭಾಗ, ಮಾನಸಿಕ ರೋಗ, ಕ್ಯಾನ್ಸರ್ ರೋಗ, ಎಲುಬು, ಕಿವಿ, ಮೂಗು, ಸ್ತ್ರೀ ರೋಗ, ಮೂತ್ರರೋಗ, ಚರ್ಮರೋಗ ಈ ವಿಭಾಗದಲ್ಲಿ ವೈದ್ಯರು ಲಭ್ಯವಿದ್ದಾರೆ ಎಂದರು.

ಲಯನ್ಸ್ ಕ್ಲಬ್​ನ ಅಧ್ಯಕ್ಷೆ ಮಂಗಲಾ ನಾಯಕ, ಎಜೆ ಆಸ್ಪತ್ರೆಯ ವೈದ್ಯರಾದ ಡಾ.ಮಯೂರ, ಡಾ.ಅರ್ಣವ್, ಡಾ. ಹರ್ಶಿತ್, ಡಾ. ಹಜ್ಮಲ್, ಡಾ. ರಾಮನಾಥ, ಶಿಬಿರ ಸಂಯೋಜಕ ಎಚ್.ಎನ್. ನಾಯ್ಕ, ಪಿಡಿಜಿ ಗಿರೀಶ ಕುಚಿನಾಡ್ ಇತರರಿದ್ದರು. ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net