

ಮುದ್ದೇಬಿಹಾಳ: ಬಸ್ ಫ್ರೀ ಇದೆ ಎಂದು ಗಂಡನ ಜತೆ ಜಗಳವಾಡಿಕೊಂಡು ತವರು ಮನೆಗೆ ಹೆಣ್ಣುಮಕ್ಕಳು ಹೋಗಬೇಡಿ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತೇನೆ ಎಂದು ಕ್ಲಾಸ್‌ಗೆ ಚಕ್ಕರ್ ಹಾಕಿ ವಿಜಯಪುರಕ್ಕೆ ದೋಸೆ ತಿನ್ನೋಕೆ ಹೋಗಬೇಡಿ.
ಇದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು, ವಿದ್ಯಾರ್ಥಿನಿಯರು, ಮಹಿಳೆಯರಿಗೆ ಹಾಸ್ಯದ ಧಾಟಿಯಲ್ಲಿ ಸರ್ಕಾರದ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಹೇಳಿದ ಕಿವಿಮಾತು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಪಕ್ಷ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿ ಭರವಸೆಯಂತೆ ಮಹಿಳೆಯರಿಗೆ ಉಚಿತವಾಗಿ ಬಸ್‌ಗಳಲ್ಲಿ ಓಡಾಡಲು ಅವಕಾಶ ಕಲ್ಪಿಸಿದ್ದು ನಾವು ನುಡಿದಂತೆ ನಡೆದಿದ್ದೇವೆ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದರೂ, ನಮ್ಮ ಕಾರ್ಯಕ್ರಮ ಎಂಬ ಭಾವನೆ ಜನರ ಮನಸ್ಸಲ್ಲಿ ಬರಬೇಕು. ಬಸ್ಸು ನಮ್ಮ ಆಸ್ತಿ ಎಂದು ಎಲ್ಲರೂ ತಿಳಿಯಬೇಕು ಎಂದರು.
ಘಟಕ ವ್ಯವಸ್ಥಾಪಕ ಬಿ.ಬಿ. ಚಿತ್ತವಾಡಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಸಾರಿಗೆ ಕಲಬುರ್ಗಿ ವಿಭಾಗದಿಂದ ಒಂದು ದಿನಕ್ಕೆ 7ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಮುದ್ದೇಬಿಹಾಳ ಘಟಕಕ್ಕೆ ಹೆಚ್ಚಿನ ಬಸ್‌ಗಳನ್ನು ಒದಗಿಸಬೇಕು. ಈಗಿನ ಡಿಪೋ ಸ್ಥಳಾಂತರಿಸಬೇಕಿದ್ದು ಆಧುನೀಕರಣಗೊಳಿಸಲು ಆದ್ಯತೆ ನೀಡುವಂತೆ ಶಾಸಕರಲ್ಲಿ ವಿನಂತಿಸಿದರು.
ಅಸ್ಕಿ ಫೌಂಡೇಷನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ, ಕೆಪಿಸಿಸಿ ಸದಸ್ಯ ಬಾಪುರಾವ ದೇಸಾಯಿ, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ, ಡಿಎಸ್ ಫೌಂಡೇಷನ್ ಅಧ್ಯಕ್ಷೆ ಪಲ್ಲವಿ ನಾಡಗೌಡ, ವಕೀಲರಾದ ಎಂ.ಎ. ಮುದ್ದೇಬಿಹಾಳ, ವೈ.ಎಚ್. ವಿಜಯಕರ, ಶಿರಸ್ತೇದಾರ ವಿ.ಸಿ. ತೊನಶ್ಯಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಗುಡದಪ್ಪ ಕಮರಿ, ರಾಜು ರಾಯಗೊಂಡ, ಉಪ ತಹಸೀಲ್ದಾರ್ ಎಸ್.ಎಸ್. ಭಾವಿಕಟ್ಟಿ, ಮುಖಂಡ ಶಿವಶಂಕರಗೌಡ ಹಿರೇಗೌಡರ, ಕಾಮರಾಜ ಬಿರಾದಾರ, ಆರ್.ಐ.ಹಿರೇಮಠ, ಮುಖ್ಯಾಧಿಕಾರಿ ಕೆ.ಎಂ. ಖಿಲಾರಿ ಇತರರಿದ್ದರು.
ಎಸ್.ಬಿ. ಪಾಟೀಲ ಸ್ವಾಗತಿಸಿದರು. ಸಿದ್ದನಗೌಡ ಬಿಜ್ಜೂರ ನಿರೂಪಿಸಿದರು. ಎಸ್.ಆರ್. ಮುಲ್ಲಾ ವಂದಿಸಿದರು. ಇದೇ ವೇಳೆ ಬಸ್‌ನಲ್ಲಿ ಸಿಹಿ ವಿತರಿಸಿ ಹೂ ನೀಡಿ ಪರಸ್ಪರ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಹಿಳಾ ಪ್ರಯಾಣಿಕರನ್ನು ಅಭಿನಂದಿಸಿದರು. ಸರಸ್ವತಿ ಪೀರಾಪೂರ, ಅಕ್ಷತಾ ಚಲವಾದಿ, ನೀಲಮ್ಮ ಚಲವಾದಿ ಇದ್ದರು.
ಗ್ಯಾರಂಟಿ ಯೋಜನೆ ಬಗ್ಗೆ ನಾವು ಸಾಕಷ್ಟು ಭಾಷಣ ಮಾಡಿದ್ದೇವು. ನಾವು ಮನೆಮನೆಗೆ ಬಂದು ಕಾರ್ಡ್ ಕೊಟ್ಟರೂ ಜನ ನಂಬಲಿಲ್ಲ. ಆವಾಗ ಯಾರು ಹಿಂದೆ ಬಂದು ಕೈಬಿಸಿ ಮಾಡಿ ಹೋದ್ರೋ ಅವರನ್ನು ನಂಬಿದ್ರು. ದಯವಿಟ್ಟು ನಾವು ನುಡಿದಂತೆ ನಡೆಯುವಂತಹ ಜನ. ಅದನ್ನು ನಂಬುವ ಕಾರ್ಯ ಜನತೆ ಮಾಡಬೇಕು.ಸಿ.ಎಸ್. ನಾಡಗೌಡ(ಅಪ್ಪಾಜಿ), ಶಾಸಕರು
ಉಚಿತ ಪ್ರಯಾಣದ ಮೊದಲ ಖುಷಿಯನ್ನು ಹಂಚಿಕೊಂಡ ತಾಳಿಕೋಟಿ, ನಾಲತವಾಡ, ನಾರಾಯಣಪುರ ಭಾಗದಲ್ಲಿ ತೆರಳುವ ಮಹಿಳೆಯರು ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಮಗೆ ಉಚಿತವಾಗಿ ಬಸ್‌ನಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಸ್ಪತ್ರೆಗೆ ಹೋಗಲು, ಮಕ್ಕಳ ಬಳಿ ತೆರಳಲು, ಕೆಲಸಕ್ಕೆ ಹೋಗಿ ಬರಲು ಅನುಕೂಲವಾಗಿದೆ ಎಂದರು. ಬಸ್ ಪ್ರಯಾಣ ಉಚಿತವಾಗಿ ಕೊಡುವ ಬದಲು ರೈತರಿಗೆ ಉತ್ತಮ ಯೋಜನೆಗಳನ್ನು, ಶಿಕ್ಷಣದ ಸಲುವಾಗಿ ಇನ್ನಷ್ಟು ಯೋಜನೆ ತರಬಹುದಾಗಿತ್ತು ಎಂದು ಒಬ್ಬ ಮಹಿಳೆ ಹೇಳಿಕೊಂಡರು.