ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

21 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ಜೀವನ ತಪಸ್ಸಿದ್ದಂತೆ. ವೈಯಕ್ತಿಕ ಆಸೆ, ಆಕಾಂಕ್ಷೆ ಬದಿಗೊತ್ತಿ ನಿರ್ದಿಷ್ಟ ಗುರಿ ಕಡೆಗೆ ಸಾಗಬೇಕು. ನಿರಂತರ ಅಧ್ಯಯನ ತರಬೇತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಸಾಧ್ಯ. ಸಮಯ ಪಾಲನೆ ಮತ್ತು ಶಿಸ್ತು ಮೈಗೂಡಿಸಿಕೊಂಡು ಯಶಸ್ಸುಗಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ. ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಕೋರ್ಸ್​ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಾಟೀಲ್ಸ್​ ಗುರುಕುಲ ಕರಿಯರ್​ ಅಕಾಡೆಮಿ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಧ್ಯಯನ ಸಾಮಗ್ರಿ ವಿತರಣೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಟೀಲ್ಸ್​ ಗುರುಕುಲ ಕರಿಯರ್​ ಅಕಾಡೆಮಿ ಸಂಸ್ಥೆ ನಿರ್ದೇಶಕ ಎನ್​.ಎಂ. ಪಾಟೀಲ ಮಾತನಾಡಿ, ಸರ್ಕಾರ ಉಚಿತವಾಗಿ ಸಾಕಷ್ಟು ಸೌಲಭ್ಯಗಳನ್ನು ಸ್ಪರ್ಧಾರ್ಥಿಗಳಿಗೆ ಒದಗಿಸಿದೆ. ಇದರ ಸದುಪಯೋಗ ಪಡೆದು ದಕ್ಷ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡಬೇಕು ಎಂದರು.
ಸುರೇಶ ನ್ಯಾಮತಿ ಮಾತನಾಡಿ, ಸದಾ ಧನಾತ್ಮಕ ಯೋಚನೆ ಮಾಡಬೇಕು. ಯಾವತ್ತು ತಮ್ಮನ್ನು ತಾವು ಕೀಳು ಮನೋಭಾವನೆಯಿಂದ ನೋಡಿಕೊಳ್ಳದೆ, ಸ್ವಯಂ ಆತ್ಮ ವಿಶ್ವಾಸ ಬೆಳೆಸಿಕೊಂಡು ಇದರ ಮೂಲಕ ಸಾಧನೆ ಮಾಡಬೇಕು ಎಂದರು.
ಶರಣು ಬಾಗೂರ ಸ್ವಾಗತಿಸಿದರು. ಶಿವಕುಮಾರ ಆರ್​.ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ನಿರೂಪಿಸಿದರು. ಸಿದ್ದರಾಮ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net