

ಗುಂಡ್ಲುಪೇಟೆ: ಸಾರ್ವಜನಿಕ ಹಿತಾಸಕ್ತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಿಡಿಒಗಳ ಸಂಘದ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆ, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಹಾಗೂ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಹಾಗೂ ಚಿಕಿತ್ಸಾ ವೆಚ್ಚ ಹೆಚ್ಚಾಗುತ್ತಿದೆ. ಆದರೆ, ಈ ಶಿಬಿರಗಳಲ್ಲಿ ತಪಾಸಣೆಗೊಳಗಾದ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವ ಜತೆಗೆ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ನೀಡಲಾಗುತ್ತಿದೆ. ವಿಜಯವಾಣಿ ದಿನಪತ್ರಿಕೆ ಸಹಯೋಗದೊಂದಿಗೆ ಇಂತಹ ಶಿಬಿರಗಳನ್ನು ನಡೆಸುತ್ತಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಮಾತನಾಡಿ, ಕ್ಯಾಂಪ್‌ಗಳಲ್ಲಿ ಕೇವಲ ತಪಾಸಣೆ ನಡೆಸದೆ ಪೊರೆ ಮಾತ್ರವಲ್ಲ ಕಣ್ಣಿನ ತೊಂದರೆಗಳಾದ ರೆಟಿನೋಪಥಿ, ಗ್ಲಾಕೋಮಾ, ಎ ವಿಟಮಿನ್ ಕೊರತೆಯಿಂದ ಬರುವ ಸಮಸ್ಯೆ, ದುರ್ಮಾಂಸ ಬೆಳೆಯುವ ಹಾಗೂ ಸಮೀಪ ಮತ್ತು ದೂರದೃಷ್ಟಿ ದೋಷ ಸೇರಿದಂತೆ ಶೇ.80ರಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತಿದೆ. ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ನಾಗೇಂದ್ರ, ಎಂ.ಸಿ.ಶಿವಪ್ರಸಾದ್, ಶಂಕರನಾರಾಯಣ ಜೋಯಿಸ್, ಅನುಗ್ರಹ ಫೌಂಡೇಷನ್ ಸಂಚಾಲಕ ಕೆ.ರಮೇಶ್, ಉದ್ಯಮಿ ರಘು, ಪಿಡಿಒ ಶಿವಸ್ವಾಮಿ, ಗ್ರಾಮಪಂಚಾಯಿತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಮಲ್ಲು, ಎಂ.ಶ್ರೀನಾಥ್, ಎ.ಮಹದೇವ, ಮಹಾಲಿಂಗಪ್ಪ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಭೈರೇಶ್ ಗಾಣಿಗ್, ನಿರ್ದೇಶಕರಾದ ವೀರಭದ್ರಪ್ಪ, ಸುರೇಶ್, ಸಿದ್ದಪ್ಪ, ಪ್ರಸಾದ್ ಇದ್ದರು. 85 ಹೊರರೋಗಿಗಳಿಗೆ ಕಣ್ಣಿನ ತಪಾಸಣೆ ಬಡಜನರಿಗೆ ಅನುಕೂಲ ಮಾಡುವ ಸಲುವಾಗಿ ಕಳೆದ 10 ವರ್ಷಗಳಿಂದ ಕ್ಯಾಂಪ್ ಆಯೋಜಿಸುತ್ತಿದ್ದು, ಮುಂದಿನ ದಿನಗಳಲ್ಲೂ ಇದನ್ನು ಮುಂದುವರಿಸಲಾಗುವುದು ಎಂದು ಶಿಬಿರದ ಆಯೋಜಕ ಎಂ.ಶ್ರೀನಾಥ್ ಹೇಳಿದರು. ಶಿಬಿರದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ನಿಖಿಲಂತ್, ಡಾ.ಅನಿರುದ್ದ್ ಶರ್ಮಾ, ಡಾ.ಗುರು ಚೇತನ್ 85 ಹೊರರೋಗಿಗಳ ಕಣ್ಣಿನ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆ ಅಗತ್ಯವಿರುವ 20 ರೋಗಿಗಳನ್ನು ಕೊಯಮತ್ತೂರಿಗೆ ಕರೆದೊಯ್ದರು.