

ಅರಸೀಕೆರೆ: ನಗರಸಭೆ ವ್ಯಾಪ್ತಿ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಮುಂದಾಗಿದ್ದು, ಮಾಲೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಹೇಳಿದರು.
ನಗರಸಭೆ ಆವರಣದಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಇ-ಖಾತೆ ಅಭಿಯಾನಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಮಾತನಾಡಿದರು. ನಗರದ 31 ವಾರ್ಡ್ ಗಳಲ್ಲಿರುವ ಆಸ್ತಿಗಳ ಮಾಲೀಕತ್ವ ಖಚಿತಪಡಿಸಿಕೊಳ್ಳಲು ಸರ್ಕಾರ ರಾಜ್ಯದ ಉದ್ದಗಲಕ್ಕೂ ವಿನೂತನ ಅಭಿಯಾನ ಆರಂಭಿಸಿದೆ. ನಿವೇಶನ, ಕಟ್ಟಡ ಸೇರಿದಂತೆ ಎಲ್ಲ ಬಗೆಯ ಆಸ್ತಿ ದಾಖಲೆಗಳನ್ನು ಗುರುತಿಸಿ ಅಗತ್ಯ ಮಾಹಿತಿ ಪಡೆದು ಕ್ರಮಬದ್ಧಗೊಳಿಸಿ ಇ- ಖಾತೆ ನೀಡಲು ಉದ್ದೇಶಿಸಿದೆ. ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಳುವ ಪುರಾವೆಗಳನ್ನು ಒದಗಿಸಿ ಸಹಕರಿಸಿ ಎಂದರು.
ಪೌರಾಯುಕ್ತ ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಇ- ಖಾತೆ ಪಡೆಯುವುದರಿಂದ ಮನೆ, ವಾಣಿಜ್ಯ ಸಂಕೀರ್ಣ, ಕಟ್ಟಡ ಕಟ್ಟಲು ಬ್ಯಾಂಕಿನ ಸಾಲ ಸೌಲಭ್ಯ ಪಡೆಯಬಹುದು. ಮಾಲೀಕರಿಗೆ ಆಸ್ತಿ ತಮ್ಮದೇ ಎಂದು ಖಚಿತಪಡಿಸಲು ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಧಾರ್ ಸೇರಿದಂತೆ ಯಾವುದೇ ರೀತಿಯ ಗುರುತಿನ ಪತ್ರ ನೀಡಿ ಇ-ಸ್ವತ್ತು ಪಡೆಯಬಹುದು. ಅಭಿಯಾನದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಮನೋಹರ್, ಸದಸ್ಯರಾದ ದರ್ಶನ್, ಅವಿನಾಶ್, ವ್ಯವಸ್ಥಾಪಕಿ ಕಲಾವತಿ, ಕಂದಾಯ ಅಧಿಕಾರಿ ಮಂಜುನಾಥ್, ಎಫ್‌ಡಿಎ ಅನಿತಾ, ಚಂದನ್, ನರೇಂದ್ರ, ಮುಖಂಡರಾದ ಹರೀಶ್, ಮಲ್ಲಿಕಾರ್ಜುನ ಸೇರಿದಂತೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.