ಸಾಲಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

3-pnp 1
ಪಾಂಡವಪುರ ತಾಲೂಕಿನ ಕುಂಬಾರಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಕ್ಷೀರ ಸಂಜೀವಿನಿ ಯೋಜನೆ ಹಂತ-3 ಯೋಜನೆಯ ಸಾಲ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಉದ್ಘಾಟಿಸಿದರು. ವರದರಾಜು, ಪ್ರಜ್ವಲ್, ನಾಗಮ್ಮ, ವರಲಕ್ಷ್ಮೀ ಇತರರು ಇದ್ದರು.
Published on

ಪಾಂಡವಪುರ: ಹಾಲು ಉತ್ಪಾದಕರು ಕ್ಷೀರ ಸಂಜೀವಿನಿ ಯೋಜನೆಯಡಿ ನೀಡಲಾಗುತ್ತಿರುವ ಸಾಲಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ ನೀಡಿದರು.


ತಾಲೂಕಿನ ಕುಂಬಾರಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ, ಮಂಡ್ಯ ಹಾಲು ಒಕ್ಕೂಟದ ಸಹಯೋಗದಲ್ಲಿ ಕ್ಷೀರ ಸಂಜೀವಿನಿ ಹಂತ-3ರ ಯೋಜನೆಯಡಿ ಗುರುವಾರ ಆಯೋಜಿಸಿದ್ದ ಮಹಿಳೆಯರಿಗೆ ಸಾಲ ಸೌಲಭ್ಯ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿರುವ 148 ಡೇರಿಗಳ ಪೈಕಿ 71 ಮಹಿಳಾ ಸಹಕಾರ ಸಂಘಗಳಿವೆ. ಇದರಲ್ಲಿ ಕ್ಷೀರ ಸಂಜೀವಿನಿ ಯೋಜನೆಯಡಿ ಕುಂಬಾರಕೊಪ್ಪಲು ಗ್ರಾಮವನ್ನು ಆಯ್ಕೆ ಮಾಡಿಕೊಂಡು 12 ಮಹಿಳೆಯರಿಗೆ 25 ಸಾವಿರ ರೂ.ನಂತೆ 3 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗಿತ್ತು. ಈಗ ಮತ್ತೆ 50 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಫಲಾನುಭವಿಗಳು ಈ ಹಣದಲ್ಲಿ ರಾಸುಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಹೈನುಗಾರಿಕೆ ರೈತರ ಜೀವನೋಪಾಯಕ್ಕೆ ಸಹಕಾರಿಯಾಗಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಖರ್ಚು, ವೆಚ್ಚ ಹಾಗೂ ಇನ್ನಿತರ ಆರ್ಥಿಕ ಹೊರೆ ನಿಭಾಯಿಸಲು ಅನುಕೂಲ. ರೈತರು ತರಕಾರಿ, ಕಬ್ಬು, ಭತ್ತ ಏನೇ ಬೆಳೆದರೂ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ಸಿಗದೆ ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಹೈನುಗಾರಿಕೆಯಲ್ಲಿ ನಷ್ಟ ಎಂಬ ಮಾತೇ ಉದ್ಭವಿಸುವುದಿಲ್ಲ ಎಂದರು.


ರಾಜ್ಯದಲ್ಲಿರುವ ಎಲ್ಲ ಒಕ್ಕೂಟಗಳ ಪೈಕಿ ಮಂಡ್ಯ ಒಕ್ಕೂಟಕ್ಕೆ ನಿತ್ಯ 11 ಲಕ್ಷ ಲೀ. ಹಾಲು ಪೂರೈಕೆಯಾಗುತ್ತಿದೆ. ಇದರಲ್ಲಿ 5 ಲಕ್ಷ ಲೀ. ಮಾರಾಟವಾಗುತ್ತಿದ್ದು, ಉಳಿದ 6 ಲಕ್ಷ ಲೀ. ಹಾಲನ್ನು ಪೌಡರ್ ಮಾಡಲಾಗುತ್ತಿದೆ. ಮನ್‌ಮುಲ್ ಒಕ್ಕೂಟ ತಯಾರಿಸುವ ಹಾಲಿನ ಪುಡಿ ಗುಣಮಟ್ಟದಿಂದ ಕೂಡಿದೆ ಎಂದು ವಿಶ್ವಸಂಸ್ಥೆ ಖರೀದಿಗೆ ಮುಂದಾಗಿದೆ. ಮುಂದೆ ಪೌಡರ್ ಮಾರಾಟದಿಂದ ಬರುವ ಲಾಭದ ಹಣವನ್ನು ಹಾಲು ಖರೀದಿ ದರ ಏರಿಸುವ ಮೂಲಕ ಉತ್ಪಾದಕರಿಗೆ ನೀಡಲಾಗುವುದು. ಅಲ್ಲದೆ ಅ.28ರಿಂದ ದೆಹಲಿ ಮಾರುಕಟ್ಟೆಗೆ ನಮ್ಮ ಒಕ್ಕೂಟದ ಹಾಲು ಪೂರೈಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ವರದರಾಜು, ಮಾರ್ಗ ವಿಸ್ತರ್ಣಾಧಿಕಾರಿ ಪ್ರಜ್ವಲ್, ಡೇರಿ ಅಧ್ಯಕ್ಷೆ ಡಿ.ಕೆ.ನಾಗಮ್ಮ, ಕಾರ್ಯದರ್ಶಿ ವರಲಕ್ಷ್ಮೀ, ಕ್ಷೀರ ಸಂಜೀವಿನಿ ಯೋಜನೆ ಸಂಯೋಜಕಿ ಸುಕನ್ಯಾ, ನಿರ್ದೇಶಕರಾದ ಚಿಕ್ಕತಾಯಮ್ಮ, ಪ್ರೇಮಕುಮಾರಿ, ವರಲಕ್ಷ್ಮೀ ಆನಂದ, ಜಯಮ ್ಮವೈಕುಂಠಶೆಟ್ಟಿ, ಗೀತಾ, ಸವಿತಾ, ಅರ್ಪಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net