

ಸವಣೂರ: 40 ವರ್ಷ ಮೇಲ್ಪಟ್ಟವರ ದೃಷ್ಟಿದೋಷಗಳಿಗೆ ಉಚಿತ ತಪಾಸಣೆಯೊಂದಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಶಾಕಿರಣ ದೃಷ್ಟಿ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ತಿಳಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ತೆರೆಯಲಾದ ಆಶಾಕಿರಣ ದೃಷ್ಟಿಕೇಂದ್ರ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೃಷ್ಟಿದೋಷದಿಂದ ಸಾಕಷ್ಟು ಜನರು ಬಳಲುತ್ತಿರುವುದನ್ನು ಮನಗಂಡ ಸರ್ಕಾರ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿಯು ದೃಷ್ಟಿ ಕೇಂದ್ರ ತೆರೆದು ಅನುಕೂಲ ಕಲ್ಪಿಸಿದೆ. ದೃಷ್ಟಿ ದೋಷ ಇರುವಂಥ ವ್ಯಕ್ತಿಗಳು ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷೆಗೆ ಒಳಪಟ್ಟರೆ ಅವಶ್ಯವಿರುವ ಚಿಕಿತ್ಸೆ ಹಾಗೂ ಔಷಧೋಪಚಾರ ಪಡೆಯಬಹುದು. ಕನ್ನಡಕ ಅವಶ್ಯಕತೆ ಇದ್ದರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ ಉಚಿತವಾಗಿ ನೀಡುವಂಥ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ ಎಂದರು.
ನೇತ್ರ ತಜ್ಞ ಡಾ. ನೂರುದ್ದೀನ್ ಬನ್ನೂರ, ಡಾ. ವೀರೇಶ ಮಠಪತಿ, ಡಾ. ನಟರಾಜ ಎಸ್.ಬಿ., ಡಾ. ಅನೂಪ್ ರಾಯ್ಕರ, ನೇತ್ರಾಧಿಕಾರಿ ಮಹಾದೇವಿ ನಂದಿಹಳ್ಳಿ, ಶಾಂತವೀರೇಶ ಎಳಮಲೆ, ರಾಮಕೃಷ್ಣ ಘಾಟಗೆ, ಜಗದೀಶ ಹಾವಣಗಿ ಇತರರಿದ್ದರು.