

ಮಡಿಕೇರಿ: ಮೊಣಕಾಲು ಹಾಗೂ ಭುಜದ ಮೂಳೆ ಸವೆತ ಹಾಗೂ ಇನ್ನಿತರ ದುರಂತಗಳಿಂದ ಹಾನಿಯಾದ ಮೊಣಕಾಲು ಹಾಗೂ ಭುಜದ ಮೂಳೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಮೊಣಕಾಲು ಹಾಗೂ ಭುಜದ ತೊಂದರೆಯಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಕಾರ್ಯಪ್ಪ ತಿಳಿಸಿದರು.
ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮೊಣಕಾಲು, ಭುಜದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ನೂತನವಾಗಿ ಆರಂಭವಾಗಿರುವ ಶಸ್ತ್ರಚಿಕಿತ್ಸಾ ಘಟಕದ ಬಗ್ಗೆ ಕೀಲು ಮತ್ತು ಮೂಳೆ ವಿಭಾಗದ ವೈದ್ಯರು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ಆನಂದ್ ಮತ್ತು ತಂಡದವರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಟೋಟಲ್ ನೀ ರಿಪ್ಲೇಸ್ಮೆಂಟ್, ನೀ ಅರ್ಥೋಸ್ಕೋಪಿ ಹಾಗೂ ಭುಜದ ಆರ್ಥೋಸ್ಕೋಪಿ ಮಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಂಪೂರ್ಣ ಚಿಕಿತ್ಸೆ ಉಚಿತವಾಗಿರುತ್ತದೆ ಎಂದು ಕಾರ್ಯಪ್ಪ ಮಾಹಿತಿ ನೀಡಿದರು.
ಡಾ.ರೂಪೇಶ್ ಗೋಪಾಲ್ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಭುಜ ಮತ್ತು ಮೊಣಕಾಲು ಸಮಸ್ಯೆಗಳಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಬೇರೆಡೆ ಮಾಡಿಸಲು ರೂ೨ ಲಕ್ಷಕ್ಕೂ ಅಧಿಕ ಚಿಕಿತ್ಸಾ ವೆಚ್ಚವನ್ನು ಭರೀಸಬೇಕಾಗುತ್ತದೆ. ಆದರೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಚಿಕಿತ್ಸೆಯು ಸಂಪೂರ್ಣ ಉಚಿತವಾಗಿರುತ್ತದೆ. ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಶೇ.೭೦ ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಹಾಗೂ ಶೇ.೩೦ ರಷ್ಟು ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಉಚಿತ ಮೊಣಕಾಲು ಹಾಗೂ ಭುಜದ ಶಸತ್ರಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ತರುವಂತೆ ತಿಳಿಸಿದರು.
ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶೋಭಾ ಮಾತನಾಡಿ, ಮೊದಲು ಮೊಣಕಾಲು ಸವೆತದಿಂದ ನಡೆದಾಡಲು ಆಗುತ್ತಿರಲಿಲ್ಲ. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ಶೇ.೭೫ ರಷ್ಟು ನೋವು ಕಮ್ಮಿಯಾಗಿದೆ. ಪ್ರಸ್ತುತ ವಾಕ್‌ಸ್ಟಿಕ್‌ನ ಸಹಾಯದಿಂದ ನಡೆದಾಡುತ್ತಿದ್ದೇನೆ. ಆಸ್ಪತ್ರೆಯ ವ್ಶೆದ್ಯರು ಹಾಗೂ ಸಿಬ್ಬಂದಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಆನಂದ್, ಕೀಲು ಮತ್ತು ಮೂಳೆ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮಂಜುನಾಥ್, ಡಾ.ವಿನಯ್, ಡಾ.ನಂಜುಂಡಯ್ಯ ಇತರರಿದ್ದರು.