ಸಂಜೀವಿನಿ ಒಕ್ಕೂಟದ ಸದುಪಯೋಗ ಪಡೆದುಕೊಳ್ಳಿ

1 nrp 4
Published on

ಎನ್.ಆರ್.ಪುರ: ಗ್ರಾಪಂ ವ್ಯಾಪ್ತಿಯ ಮಹಿಳೆಯರು ಸಂಜೀವಿನಿ ಒಕ್ಕೂಟದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆಡುವಳ್ಳಿ ಗ್ರಾಪಂ ಅಧ್ಯಕ್ಷ ಪ್ರದೀಪ ಹೇಳಿದರು.
ತಾಲೂಕಿನ ಆಡುವಳ್ಳಿ ಗ್ರಾಪಂನಲ್ಲಿ ನಡೆದ ಗ್ರಾಮಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿ ಮಹಾಸಭೆಯಲ್ಲಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಲು ಸಂಜೀವಿನಿ ಒಕ್ಕೂಟಗಳು ಸಹಕಾರಿ. ಗ್ರಾಪಂ, ಸ್ವ ಸಹಾಯ ಸಂಘಗಳು ಹಾಗೂ ಒಕ್ಕೂಟಗಳ ಸಭೆಗಳಿಗೆ ಮಹಿಳೆಯರು ಹೆಚ್ಚು ಭಾಗವಹಿಸಬೇಕು ಎಂದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ, ಒಕ್ಕೂಟದ ರಚನೆ, ಹಣಕಾಸು ವ್ಯವಹಾರಗಳು, ಒಕ್ಕೂಟದ ಕಾರ್ಯಕಾರಿಣಿ ಸಮಿತಿ ಬದಲಾವಣೆ ನಿಯಮಗಳು, ಒಕ್ಕೂಟದಲ್ಲಿನ ಕಾರ್ಯ ವೈಖರಿಗಳ ಬಗ್ಗೆ ವಾರ್ಷಿಕ ಮಹಾಸಭೆಯಲ್ಲಿ ಮುಕ್ತವಾಗಿ ಚರ್ಚಿಸಲಾಗುತ್ತದೆ. ಸಭೆಯಲ್ಲಿ ಲೆಕ್ಕಪತ್ರಗಳ ಮಂಡನೆ ಹಾಗೂ ನೂತನ ಕಾರ್ಯಕಾರಿಣಿ ಸಮಿತಿ ಪದಾಧಿಕಾರಿಗಳ ಆಯ್ಕೆಯಾಗಲಿದೆ. ಒಕ್ಕೂಟದಲ್ಲಿ ಸಮುದಾಯ ಬಂಡವಾಳ, ಪ್ರಧಾನಮಂತ್ರಿ ಕಿರು ಆಹಾರ ಉದ್ಯಮ ಮುಂತಾದ ಯೋಜನೆಗಳ ಮೂಲಕ ಮಹಿಳೆಯರಿಗೆ ಹಲವಾರು ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ ಎಂದರು.
ವಲಯ ಮೇಲ್ವಿಚಾರಕ ಗಿರೀಶ್ ಮಾತನಾಡಿ, ಸಂಜೀವಿನಿ ಒಕ್ಕೂಟ ರಚನೆ ಸಹಕಾರ ಸಂಘಗಳ ಕಾಯ್ದೆ 1960ರ ಪ್ರಕಾರ ನೋಂದಣಿಯಾಗಿದ್ದು, ಶಾಸನಬದ್ಧ ಲೆಕ್ಕ ಪರಿಶೋಧನೆ ನಡೆದಿದ್ದು, ಅದರ ಸಮಗ್ರ ಖರ್ಚು ವೆಚ್ಚಗಳ ಮತ್ತು ಅನುದಾನಗಳ ಸಮರ್ಪಕ ಬಳಕೆ ಕುರಿತು ಚರ್ಚಿಸುವ ಉದ್ದೇಶದಿಂದ ಈ ಮಹಾಸಭೆ ಆಯೋಜಿಸಲಾಗುತ್ತದೆ ಎಂದರು.
ಪಿಡಿಒ ಮಂಜುಳ ಮಾತನಾಡಿ,ಮಹಿಳೆಯರಿಗೆ ನರೇಗಾ ಯೋಜನೆಯಡಿ ಪುರುಷರಿಗೆ ಸಮಾನ ಕೂಲಿ ಇದ್ದು, ಮಹಿಳೆಯರು ನರೇಗಾ ಯೋಜನೆ ಕಾಮಗಾರಿಗಳಲ್ಲಿ ಕೆಲಸ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿ ಉದ್ಯೋಗ ಪಡೆಯಬಹುದೆಂದರು.
ಆಡುವಳ್ಳಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷೆ ಯಶೋಧ, ಗ್ರಾಪಂ ಸದಸ್ಯರಾದ ಚನ್ನಪ್ಪಗೌಡ, ಪ್ರತಿಮಾ, ಕವಿತಾ, ಕಾರ್ಯದರ್ಶಿ ಜ್ಯೋತಿ, ಖಜಾಂಚಿ ಪ್ರೇಮಾ, ಒಕ್ಕೂಟದ ಸಿಬ್ಬಂಗಳಾದ ರಮ್ಯಾ,ಸುನಿತಾ, ಅನಿತಾ, ಕಿಶೋರ್, ಶೈನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net