ಪೌತಿ ಖಾತೆ ಆಂದೋಲನ ಸದುಪಯೋಗ ಪಡೆಯಿರಿ

10 SARAG 1
ಸರಗೂರು ತಾಲೂಕಿನ ಎಂ.ಸಿ. ತಳಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಪತ್ರ ವಿತರಣೆ ಮಾಡಲಾಯಿತು.
Published on

ಸರಗೂರು: ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸರಗೂರು ಹೋಬಳಿ ರಾಜಸ್ವ ನಿರೀಕ್ಷಕ ರವಿಚಂದ್ರನ್ ತಿಳಿಸಿದರು.

ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೌಢಶಾಲೆಯ ಆವರಣದಲ್ಲಿ ನಡೆದ ಪೌತೆಖಾತೆ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೌತಿ ಖಾತೆ ಆಂದೋಲನ ನಡೆಸುವ ಮೂಲಕ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಿದ್ದು, ಎಲ್ಲರೂ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಖಾತಾ ತಂತ್ರಾಂಶದಿಂದ ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಜಮೀನು ಮಾಲೀಕ ಮರಣ ಹೊಂದಿದ್ದರೆ ಜಮೀನಿನ ವಾರಸುದಾರರಾಗಿ ಕುಟುಂಬದ ಸದಸ್ಯರಿಗೆ ಹಕ್ಕು ಪಡೆಯಲು ಪೌತಿ ಖಾತೆ ಸಹಕಾರಿಯಾಗಿದೆ. ಸರ್ಕಾರ ಈಗಾಗಲೇ ಸೌಲಭ್ಯ ಪಡೆಯುವುದಕ್ಕಾಗಿ ಜಮೀನಿನ ಮಾಲೀಕರ ಪಹಣಿಗೆ ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮ ಲೆಕ್ಕಿಗ ಪುರುಷೋತ್ತಮ್ ಮಾತನಾಡಿ, ಪೌತಿ ಖಾತೆಗೆ ಮೃತ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ, ಗ್ರಾಮದ ಮಹಜರ್ ವರದಿ, ವಂಶವೃಕ್ಷ ಅಗತ್ಯ. ಖಾತಾ ಆಂದೋಲನದಿಂದ ಆಸ್ತಿಯ ಎಲ್ಲ ವಾರಸುದಾರರ ಒಪ್ಪಿಗೆಯು ದಾಖಲಾಗುವುದರಿಂದ ನಕಲಿ ಆಗುವುದನ್ನು ತಪ್ಪಿಸಬಹುದು. ತಂತ್ರಾಂಶದ ಮೂಲಕ ಆಧಾರ್ ಇ-ಕೆವೈಸಿ ಪಡೆಯುವುದರಿಂದ ಎಂಆರ್ ಪ್ರಕ್ರಿಯೆ ಮುಗಿದ ಬಳಿಕ ಸ್ವಯಂ ಚಾಲಿತವಾಗಿ ಪಹಣಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗಲಿದೆ ಎಂದು ಹೇಳಿದರು.

ಎಂ.ಸಿ. ತಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಚಂದ್ರ, ಮುಖಂಡರಾದ ಭುವನೇಶ್, ಶಿವಪ್ಪ, ಪುಟ್ಟರಾಜು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net