ಆನ್‌ಲೈನ್ ಕೋಚಿಂಗ್ ಸದುಪಯೋಗ ಪಡೆಯಲಿ

Madhu
Published on

ಸಿದ್ದಾಪುರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರೂ. ವ್ಯಯಿಸಬೇಕಾಗಿದ್ದು ಇದರಿಂದ ಬಡವರಿಗೆ ತುಂಬಾ ಹೊರೆಯಾಗುತ್ತಿದೆ. ರಾಜ್ಯದ ಎಲ್ಲ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್ ಪ್ರಾರಂಭಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಕ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು. ಸಿಇಟಿ, ನೀಟ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಉಚಿತ ಆನ್‌ಲೈನ್ ಕೋಚಿಂಗ್ ಪ್ರಾರಂಭಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ಕೋಚಿಂಗ್ ಇರಲಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಗಣಕವಿಜ್ಞಾನಕ್ಕೆ ಭಾರಿ ಬೇಡಿಕೆ ಬರುತ್ತಿದ್ದು ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಆರಂಭಿಸಲು ಪ್ರಯತ್ನಿಸಲಾಗುವುದು. ಸರ್ಕಾರಿ ಪಿಯು ಕಾಲೇಜುಗಳಿಗೆ 800 ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ತಯಾರಿ ನಡೆದಿದ್ದು, ಫೆಬ್ರವರಿಯೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿದೆ. ವಿದ್ಯಾರ್ಥಿಗಳು ಪಾಲಕರ ಆಶಯವನ್ನು ಈಡೇರಿಸಬೇಕು. ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಗಣಕಯಂತ್ರಗಳಿಗೆ ತುಂಬಾ ಬೇಡಿಕೆಯಿದ್ದು, ಸರ್ಕಾರ ಇದಕ್ಕೆ ಉತ್ತೇಜನ ನೀಡಬೇಕು. ಮಧು ಬಂಗಾರಪ್ಪ ಸಚಿವರಾದಾಗ ಶಿಕ್ಷಕರ ಕೊರತೆಯಿತ್ತು. ನ್ಯಾಯಾಲಯದ ಅಡೆತಡೆ ನಿವಾರಿಸಿ 13 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕ ಮಾಡಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ ಕೆ.ಎಚ್., ತಹಸೀಲ್ದಾರ್ ಎಂ.ಆರ್.ಕುಲಕರ್ಣಿ, ಬಿಇಒ ಎಂ.ಎಚ್. ನಾಯ್ಕ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಕಾಲೇಜಿನ ಪ್ರಾಚಾರ್ಯ ಭಾಸ್ಕರ ಹೆಗಡೆ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುನಾವರ್ ಗುರಕಾರ್, ಲೀನಾ ಫರ್ನಾಂಡಿಸ್, ಎಸ್.ಕೆ. ನಾಯ್ಕ ಉಪಸ್ಥಿತರಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಂದ್ರ ದಪೇಧಾರ್ ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ ನಾಯ್ಕ ನಿರೂಪಿಸಿದರು.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ತಾಲೂಕಿನ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net