

ಯಳಂದೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮದ ರಸ್ತೆ, ಜಮೀನು ಹಾಗೂ ಅನೇಕ ವೈಯುಕ್ತಿಕ ಕಾಮಗಾರಿಗಳನ್ನು ಮಾಡಲು ಅವಕಾಶವಿದ್ದು ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಪಿಡಿಒ ಮಂಜುನಾಥ್ ಕರೆ ನೀಡಿದರು.
ಯರಗಂಬಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಮಾತನಾಡಿ, ವೈಯಕ್ತಿಕವಾಗಿ ಒಬ್ಬರು ಮೂರು ಕಾಮಗಾರಿಗಳನ್ನು ಮಾಡಲು ಅವಕಾಶವಿದೆ. ಈಗ ಆನ್‌ಲೈನ್‌ನಲ್ಲಿ ಕಾಮಗಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕರು ನರೇಗಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ತಮ್ಮ ಜಮೀನುಗಳ ಅಭಿವೃದ್ಧಿಗೆ ಇದೊಂದು ಉತ್ತಮ ಯೋಜನೆಯಾಗಿದೆ ಎಂದರು.
ಕಳೆದ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಯಿಂದ 105, ತೋಟಗಾರಿಕೆ ಇಲಾಖೆ ವತಿಯಿಂದ 12, ಅರಣ್ಯ ಇಲಾಖೆಯ 8, ಕೃಷಿ ಇಲಾಖೆಯ 4 ಕಾಮಗಾರಿಗಳೂ ಸೇರಿದಂತೆ ಒಟ್ಟು 129 ಕಾಮಗಾರಿಗಳು ನಡೆದಿವೆ. ಇದರಲ್ಲಿ ಒಟ್ಟು 40.77 ಲಕ್ಷ ರೂ. ಕೂಲಿ ಮೊತ್ತವನ್ನು ಪಾವತಿಸಲಾಗಿದೆ. ಸಾಮಗ್ರಿ ಮೊತ್ತ 6.48 ಲಕ್ಷ ರೂ.ಗಳು ಸೇರಿದಂತೆ ಒಟ್ಟು 47.26 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಡಿ.ಸಿ.ಬಾಬು, ನಾಗರಾಜು, ಮಹೇಶ್, ಸೋಮಣ್ಣ, ಸಿದ್ದರಾಜು, ಪಶು ಇಲಾಖೆ ಬಸವರಾಜು, ತೋಟಗಾರಿಕಾ ಇಲಾಖೆ ಶಿವರಂಜನಿ, ಬಿಲ್ ಕಲೆಕ್ಟರ್ ಇಂದ್ರ, ರವಿ ಸೇರಿದಂತೆ ಅನೇಕರು ಇದ್ದರು.