

ಬೆಳಗಾವಿ: ಕೇಂದ್ರ ಸರ್ಕಾರವು ಯುವ ಉದ್ದಿಮೆದಾರರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಎಂ.ಎಸ್.ಎಂ.ಇ.ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಯಶಸ್ವಿ ಉದ್ಯಮಿಯಾಗಬೇಕು ಎಂದು ಕೊಲ್ಹಾಪುರದ ಜೆ.ಮೆಕಾಟ್ರಾನಿಕ್ಸ್ ಸಂಸ್ಥಾಪಕ ಪಾಲುದಾರ ಮೋನಿಶ ಜಿರ್ಗೆ ಸಲಹೆ ನೀಡಿದರು.
ಈಚೆಗೆ ಭರತೇಶ ಗ್ಲೋಬಲ್ ಬಿಜಿನೆಸ್ ಸ್ಕೂಲ್, ಎಂ.ಎಸ್.ಎಂ.ಇ. ಬೆಂಗಳೂರು ತಂತ್ರಜ್ಞಾನ ಕೇಂದ್ರದ ಸಹಯೋಗದೊಂದಿಗೆ ಎಂ.ಬಿ.ಎ. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಉದ್ಯಮಶೀಲತಾ ಕಾರ್ಯಾಗಾರಕ್ಕೆ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿ, ಯುವ ಜನರು ಎಂ.ಇ.ಎಸ್.ಇ. ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಎಂ.ಎಸ್.ಎಂ.ಇ ತರಬೇತಿ ಕೇಂದ್ರ ಬೆಂಗಳೂರು ವಿಭಾಗದ ಮುಖ್ಯಸ್ಥ ಪ್ರವೀಣಕುಮಾರ ಎಂ.ಪಿ., ಗ್ರೋಥ್ ಮ್ಯಾಟ್ರಿಕ್ಸ್ ಸಂಸ್ಥೆ ಸಿಇಒ, ಸಂಸ್ಥಾಪಕ ಪುನೀತ ಕೋರ್ವಾರ ಮಾತನಾಡಿ,
ಎಂ.ಎಸ್.ಎಂ.ಇ. ಮೂಲಕ ಡಿಜಿಟಲ್ ಸೇವಾ ಆಧಾರಿತ ಸ್ಟಾರ್ಟ್ ಅಪ್ ಮತ್ತು ಡಿಜಿಟಲ್ ಉದ್ದಿಮೆಗಳನ್ನು ಪ್ರಾರಂಭಿಸಲು ವಿಪುಲ ಅವಕಾಶಗಳಿವೆ. ಈ ಅವಕಾಶಗಳ ಸದುಪಯೋಗ ಪಡೆದುಕೊಂಡು ದೇಶದ ಆರ್ಥಿಕ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಮಾತನಾಡಿ, ಡಿಜಿಟಲ್ ಮತ್ತು ತಾಂತ್ರಿಕ ಯುಗದಲ್ಲಿ ಉದ್ಯಮಗಳನ್ನು ಪ್ರಾರಂಭಿಸುವಾಗ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಉದ್ದಿಮೆ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಗ್ಲೋಬಲ್ ಬಿಜಿನೆಸ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಶರದ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಡಾ.ಪ್ರಸಾದ ದಡ್ಡಿಕರ ಸ್ವಾಗತಿಸಿದರು. ರಂಜನಾ ಚೌಗುಲೆ, ಡಾ.ನಿಖಿಲ ರಗಶೆಟ್ಟಿ, ಮಾಣಿಕಚಂದ ಬಸ್ತವಾಡ, ಡಾ.ಗುರುಪ್ರಸಾದ ಕೋಟಿ ಕಾರ್ಯಕ್ರಮ ಸಂಯೋಜಿಸಿದ್ದರು. ಮಂದಾರ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು.