

ದೇವದುರ್ಗ: ಬಾಲಕಿಯರ ಶಿಕ್ಷಣ ಹಾಗೂ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲಕ್ಷ್ಮೀ ರಾಠೋಡ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣು ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶಿಕ್ಷಣ, ಉಳಿತಾಯ, ಸ್ವಯಂ ಉದ್ಯೋಗಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ವಿದ್ಯೆಯಿಂದ ಜೀವನ ಸುಂದರವಾಗಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಒಳ್ಳೆಯ ಪ್ರಜೆಯಾನ್ನಾಗಿ ಮಾಡುವುದು ಪಾಲಕರ ಜವಾಬ್ದಾರಿ ಎಂದರು.
ಮುಖ್ಯಶಿಕ್ಷಕ ಮಹಾದೇವ, ಮಿಷನ್ ಶಕ್ತಿ ಯೋಜನೆ ಜಿಲ್ಲಾ ಸಂಯೋಜಕ ಬಾವಸಲಿ, ಮೇಲ್ವಿಚಾರಕಿ ನಿರ್ಮಲಾ ದೇವಿ, ಅಂಗನವಾಡಿ ಕಾರ್ಯಕರ್ತೆ ಸುರೇಖಾ, ಜಿಲ್ಲಾ ಮಕ್ಕಳ ಸಹಾಯವಾಣಿ ಅಧಿಕಾರಿ ತಿಕ್ಕಯ್ಯ, ಶಿಕ್ಷಕಿ ಕಲ್ಪನಾ ಪಾಟೀಲ್ ಇದ್ದರು.