

ಮಡಿಕೇರಿ:
ಯುವಜನಾಂಗ ಆಗಾಗ್ಗೆ ಸಮಾಜ ಕಲ್ಯಾಣ ಇಲಾಖೆ ವೆಬ್‌ಸೈಟ್ ಪರಿಶೀಲಿಸುವ ಮೂಲಕ ಸರ್ಕಾರದಿಂದ ಲಭ್ಯವಾಗುವ ಯೋಜನೆಗಳ ಮಾಹಿತಿ ತಿಳಿದುಕೊಂಡು ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಹೊಂದುವಂತಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್ ಹೇಳಿದರು. ಮಂಗಳವಾರ ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ರಿಕೆಯ ಓದುಗರ ದೂರವಾಣಿ ಕರೆಗಳಿಗೆ ಉತ್ತರಿಸಿ ಮಾತನಾಡಿದರು.
ಬಹುತೇಕ ದೂರವಾಣಿ ಕರೆಗಳು ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಇದ್ದವು. ಪ್ರಶ್ನೆಗಳು ಪುನರಾವರ್ತನೆ ಆದರೂ ಎಲ್ಲಾ ಓದುಗರಿಗೂ ಸಮಾಧಾನದಿಂದಲೇ ಉತ್ತರಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ತನಕದ ವಿದ್ಯಾರ್ಥಿಗಳು ಒಂದನೇ ತರಗತಿಯಲ್ಲಿರುವಾಗ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಒಮ್ಮೆ ನೋಂದಾಯಿಸಿಕೊಂಡು ಆಧಾರ್ ಸೀಡ್ ಮಾಡಿದರೆ ಸಾಕು, ೧೦ನೇ ತರಗತಿ ತನಕ ಪ್ರತಿವರ್ಷವೂ ವಿದ್ಯಾರ್ಥಿವೇತನ ಬರುತ್ತಿರುತ್ತದೆ. ಇದಕ್ಕೂ ಮೊದಲು ಸಂಬಂಧಿಸಿದ ಶಾಲೆಯಲ್ಲಿ ಸಂಬಂಧಿಸಿದ ವಿದ್ಯಾರ್ಥಿ ಓದುತ್ತಿರುವ ಬಗ್ಗೆ ಇಲಾಖೆಯಿಂದ ಖಾತರಿಪಡಿಸಿಕೊಳ್ಳಲಾಗುತ್ತದೆ.
ಪಿಯುಸಿ ನಂತರ ವಿದ್ಯಾರ್ಥಿ ವೇತನ ಪಡೆಯಬೇಕಾದರೆ ಪ್ರತಿ ವರ್ಷವೂ ನೋಂದಾಯಿಸಿಕೊಳ್ಳಬೇಕು. ಸರ್ಕಾರದ ವಸತಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ವಸತಿ ಮತ್ತು ವಿದ್ಯಾಬ್ಯಾಸ ಇರುವುದರಿಂದ ಅಂತಹ ಮಕ್ಕಳಿಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿಲ್ಲ. ಪ್ರತಿ ವರ್ಷವೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತದೆ. ಒಮ್ಮೆ ಅನುತ್ತೀರ್ಣ ಆದರೆ ಈ ಸೌಲಭ್ಯ ಸಿಗುವುದಿಲ್ಲ. ಕೆಎಎಸ್, ಐಎಎಸ್, ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲಾಖೆ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತದೆ. ಈ ಅವಕಾಶವನ್ನೂ ಯುವಕರು ಬಳಸಿಕೊಳ್ಳಬೇಕು.
೧ ರಿಂದ ೧೦ನೇ ತರಗತಿ ತನಕದ ಪ.ಜಾ. ಮತ್ತು ಪ.ಪಂ.ದ ವಿದ್ಯಾರ್ಥಿಗಳಿಗೆ ಒಂದು ಸಾವಿರದಿಂದ ೩ ಸಾವಿರದ ತನಕ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅವರ ಕೋರ್ಸ್‌ಗಳಿಗೆ ಅನುಗುಣವಾಗಿ ೨೩೦ರೂ.ನಿಂದ ೧,೨೦೦ ರೂ. ತನಕ ಮಾಸಿಕ ನಿರ್ವಹಣಾ ಭತ್ಯೆ ಇದೆ. ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ.ಜಾ. ಮತ್ತು ಪ.ಪಂ.ದ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ೭,೫೦೦ ರೂ.ನಿಂದ ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ೩೫ ಸಾವಿರ ರೂ. ತನಕ ಪ್ರೋತ್ಸಾಹ ಧನ ಕೊಡಲಾಗುತ್ತಿದೆ. ಕಾನೂನು ಪದವೀಧರರಿಗೆ ಮಾಸಿಕ ೧೦ ಸಾವಿರದಂತೆ ಶಿಷ್ಯವೇತನದ ಸೌಲಭ್ಯವೂ ಇದೆ.
ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ಇಲಾಖೆಯ ವಿದ್ಯಾರ್ಥಿವೇತನ ಕೊಡಲಾಗುತ್ತಿದೆ. ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದ ವಿದ್ಯಾರ್ಥಿವೇತನ ಮಕ್ಕಳ ಬ್ಯಾಂಕ್ ಖಾತೆಗೆ ಬಾರದಿರಬಹುದು. ಇಂತಹ ಸಂದರ್ಭದಲ್ಲಿ ನಿಗದಿತ ಮಗುವಿನ ದಾಖಲೆ ಸಮೇತ ಸಂಬಂಧಿಸಿದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿ ಸಂಪರ್ಕಿಸಿದರೆ ಅಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.
ಸ್ವ-ಉದ್ಯೋಗಕ್ಕೆ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮೂಲಕ ಫಲಾನುಭವಿಗಳಿಗೆ ನೆರವು ನೀಡಲಾಗುತ್ತಿದ್ದು, ಆಸಕ್ತ ನಿರುದ್ಯೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ವಾಹನಕ್ಕೆ ಸಾಲ ಮಾತ್ರವಲ್ಲದೆ ಅಂಗಡಿ ಮಳಿಗೆ ಸೇರಿ ವಿವಿಧ ಉದ್ದಿಮೆಗಳಿಗೂ ಸಾಲ ಕೊಡಲಾಗುತ್ತದೆ. ಇದಕ್ಕೆ ಕೂಡಿಗೆಯಲ್ಲಿರುವ ಯುನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದ ನೆರವು ಕೂಡ ಪಡೆದುಕೊಳ್ಳಬಹುದು. ಇಲ್ಲಿ ಬೇರೆ ಬೇರೆ ವಿಷಯದಲ್ಲಿ ವಸತಿ, ಊಟ ಸಮೇತ ಉಚಿತ ತರಬೇತಿ ಇರುತ್ತದೆ. ನಂತರ ಬ್ಯಾಂಕ್‌ಗಳ ಮೂಲಕವೂ ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೆಕು ಎಂದು ಹೇಳಿದರು.
ಕೆದಮಳ್ಳೂರುವಿನಿಂದ ಕರೆ ಮಾಡಿದ್ದ ಗ್ರಾ.ಪಂ. ಉಪಾಧ್ಯಕ್ಷ ಪರಮೇಶ್ವರ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯ ಜನಾಂಗಕ್ಕೆ ವಾಲ್ಮೀಕಿ ನಿಗಮದಿಂದ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಶೇಖರ್, ಇದು ಅಲೆಮಾರಿ ಅಭಿವೃದ್ಧಿ ನಿಗಮದಿಂದ ಮಂಜೂರಾಗಿದ್ದ ಮನೆಗಳಾಗಿದ್ದು, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸಿಕೊಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಾಗಿದ್ದು, ಸದ್ಯದಲ್ಲೇ ಪರಿಹಾರ ಆಗುವ ನಿರೀಕ್ಷೆ ಇದೆ ಎಂದರು.
ಕುಶಾಲನಗರದಿಂದ ಕರೆ ಮಾಡಿದ್ದ ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ದುರುಪಯೋಗ ಆಗುತ್ತಿದ್ದು, ಅರ್ಹರಲ್ಲದವರಿಗೆ ನೀಡಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಶೇಖರ್, ಜಾತಿ ಪ್ರಮಾಣ ಪತ್ರ ವಿತರಿಸುವ ಜವಾಬ್ದಾರಿ ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್ ಅವರಿಗೆ ಸೇರಿದ್ದು, ಇದರಲ್ಲಿ ದುರುಪಯೋಗ ಕಂಡುಬಂದರೆ ಮೊದಲ ಮೇಲ್ಮನವಿ ಪ್ರಾಧಿಕಾರವಾಗಿರುವ ಉಪವಿಭಾಗಾಧಿಕಾರಿ ಅವರಿಗೆ ದೂರು ನೀಡಬಹುದು. ಅವರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಕಡಗದಾಳು ಗ್ರಾಮದಿಂದ ಕರೆ ಮಾಡಿದ್ದ ಮಾದೇಟಿರ ತಿಮ್ಮಯ್ಯ ಮಾತನಾಡಿ ತಮ್ಮ ಗ್ರಾಮದಲ್ಲಿ ಭೂ ಒಡೆತನ ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ಕೊಟ್ಟಿದ್ದ ಭೂಮಿ ಮಾರಾಟ ಮಾಡಲಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಮಾಹಿತಿ ನೀಡಿದ ಶೇಖರ್, ಈ ರೀತಿ ಭೂ ಒಡೆತನ ಯೋಜನೆ ಅಡಿಯಲ್ಲಿ ಹಂಚಿಕೆ ಆದ ಭೂಮಿ ಮಾರಾಟ ಮಾಡುವಂತಿಲ್ಲ. ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರೆ ಅವರು ಪರಿಶೀಲಿಸುತ್ತಾರೆ. ಮಾರಾಟ ಆಗಿದ್ದರೆ ಅಥವಾ ಬಲವಂತವಾಗಿ ಈ ಭೂಮಿ ಪಡೆದುಕೊಂಡರೆ ಮರಳಿ ಪಡೆದಿಕೊಳ್ಳುವ ಅವಕಾಶವಿದೆ ಎಂದರು.
ಹೆಬ್ಬಾಲೆಯ ಉಮೇಶ್ ಕರೆ ಮಾಡಿ ಕೊಡಗಿನಲ್ಲಿ ಹೆಚ್ಚುತ್ತಿರುವ ಭಿಕ್ಷುಕರ ಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆಗೆ ಮುಕ್ತಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶೇಖರ್ ಮೈಸೂರಿನಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆಯಾಯ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯಾಡಳಿತದವರು ಭಿಕ್ಷುಕರನ್ನು ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ ಸೇರಿಸುತ್ತಾರೆ. ಅಲ್ಲಿ ಅವರಿಗೆ ಹೊಸ ಬದುಕು ಕೊಡಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
ಮಾಲ್ದಾರೆಯಿಂದ ಕರೆ ಮಾಡಿದ್ದ ಶೋಭಾ ತಮ್ಮೂರಿನಲ್ಲಿ ಜೇನುಕುರುಬ ಜನಾಂಗದ ವಿದ್ಯಾವಂತರು ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಿದ್ದರೂ ಸಿಗಲಿಲ್ಲ ಎಂದು ದೂರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶೇಖರ್, ವಿಷಯವನ್ನು ಸಂಬಂಧಿಸಿದ ಇಲಾಖೆ ಗಮನಕ್ಕೆ ತರಲಾಗುವುದು. ಆದಷ್ಟು ಶೀಘ್ರ ನಿರುದ್ಯೋಗ ಭತ್ಯೆ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ತಮ್ಮೂರಿಗೆ ಸಮುದಾಯ ಭವನ ಬೇಕು ಎನ್ನುವ ಶೋಭಾ ಮನವಿಗೆ ಸ್ಪಂದಿಸಿದ ಅಧಿಕಾರಿ, ಸೂಕ್ತ ಆರ್‌ಟಿಸಿ ಇದ್ದರೆ ಸಮುದಾಯ ಭವನಕ್ಕೆ ಅರ್ಜಿ ಹಾಕಬಹುದು. ಗ್ರಾಮ ಮಟ್ಟದಲ್ಲಿ ೨೦ ಲಕ್ಷ, ಹೋಬಳಿ ಮಟ್ಟದಲ್ಲಿ ೭೫ ಲಕ್ಷ, ತಾಲೂಕು ಮಟ್ಟದಲ್ಲಿ ೨ ಕೋಟಿ ಹಾಗೂ ಜಿಲ್ಲಾ ಮಟ್ಟದಲ್ಲಿ ಇದಕ್ಕಾಗಿ ೪ ಕೋಟಿ ರೂ. ಕೊಡುವ ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದಿಂದ ಅರಣ್ಯ ಹಕ್ಕು ಪತ್ರ ಸಿಕ್ಕಿದೆ ಆದರೆ ಜಂಟಿ ಆರ್‌ಟಿಸಿ ಇರುವುದರಿಂದ ಸರ್ಕಾರದ ಸವಲತ್ತು ಪಡೆಯಲು ಆಗುತ್ತಿಲ್ಲ. ಹಕ್ಕು ಪತ್ರಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ದಿಡ್ಡಳ್ಳಿಯ ಗಿರಿಜನ ಮುಖಂಡ ಅಪ್ಪಾಜಿ ಗಮನ ಸೆಳೆದರು. ಈ ವಿಷಯದ ಪರಿಶೀಲನೆ ನಡೆಸುವುದಾಗಿ ಶೇಖರ್ ಹೇಳಿದರು.