ಸರ್ಕಾರಿ ಸೌಲಭ್ಯ ಸದುಪಯೋಗಿಸಿಕೊಳ್ಳಿ

Take advantage of government facilities
Published on

ಹುನಗುಂದ: ವ್ಯಕ್ತಿ ಮತ್ತು ಸಮಾಜಗಳ ಪ್ರಗತಿಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಸಾಮಾನ್ಯರಿಗೂ ಶಿಕ್ಷಣ ಸುಲಭವಾಗಿ ದೊರೆಯುವಂತಾಗಲು ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಸದುಪಯೋಗಪಡಿಸಿಕೊಳ್ಳಬೇಕೆಂದು ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಲೇಜು ಪ್ರಾರಂಭೋತ್ಸವ ಮತ್ತು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಓದುವ ಅಭಿರುಚಿ, ಸತತ ಪ್ರಯತ್ನ, ಸಾಧಕರ ಜೀವನ ಚರಿತ್ರೆಯನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆದರೆ ಮಾತ್ರ ನಾವಿಟ್ಟುಕೊಂಡ ಗುರಿ ತಲುಪಿ ಮಾದರಿ ವ್ಯಕ್ತಿಗಳಾಗಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ, ಅಂಕ ಪ್ರಧಾನ ಜಗತ್ತಿನಲ್ಲಿ ಸಾಧಕರಿಗೆ ವಿಪುಲ ಅವಕಾಶಗಳಿದ್ದು, ಅವುಗಳನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.

ಕಾಲೇಜಿನ ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಕಳೆದ ವರ್ಷದಿಂದ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಸಿದ್ಧರಾಗಲು ಉಚಿತ ಆನ್‌ಲೈನ್ ತರಗತಿ ನಡೆಸುತ್ತಿದ್ದು, ವಿದ್ಯಾರ್ಥಿಗಳು ಅದರ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದರು.

ಕಾಲೇಜು ಅಭಿವೃದ್ಧಿ ಸಮಿತಿ ಹಿರಿಯ ಸದಸ್ಯರಾದ ಚಂದ್ರಶೇಖರ ಚಟ್ನಿಹಾಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹುಚ್ಚೇಶ ಕಾಳಹಸ್ತಿಮಠ ಇದ್ದರು.

ಸೇವಂತಿ ಬೆಣಗಿ ಪ್ರಾರ್ಥಿಸಿದರು. ಉಪನ್ಯಾಸಕ ವಿ.ಕೆ. ಶಶಿಮಠ ಸ್ವಾಗತಿದರು. ಎಚ್.ಟಿ. ಅಗಸಿಮುಂದಿನ ವಂದಿಸಿದರು. ಡಾ. ಎನ್.ವೈ. ನದ್ಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net