ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ

11 LXR 1
Published on

ಲಕ್ಷ್ಮೇಶ್ವರ: ಕುಡಿಯುವ ನೀರು ಸರಬರಾಜಿನ ಬಗ್ಗೆ ನಿರ್ಲಕ್ಷೃ ತೋರದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸ್ಥಳೀಯ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು.

ಪಟ್ಟಣದಲ್ಲಿನ ನೀರು ಸರಬರಾಜು ಜಲಾಗಾರಗಳನ್ನು ಬುಧವಾರ ವೀಕ್ಷಿಸಿ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಸರಬರಾಜಾಗುವ ಪೈಪ್‌ಲೈನ್ ಮತ್ತು ಯಂತ್ರೋಪಕರಣಗಳು ಪದೇಪದೆ ದುರಸ್ತಿಗೆ ಬರುತ್ತಿವೆ. ಹೊಸ ಪೈಪ್‌ಲೈನ್ ಯೋಜನೆಯ ಅನುದಾನಕ್ಕಾಗಿ 3 ಹಂತದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಅನುದಾನ ತರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಅಮೃತ 2.0 ಯೋಜನೆಯಲ್ಲಿ ಲಭ್ಯವಿರುವ 33 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದಾಗ್ಯೂ ಕಾಮಗಾರಿ ಸಾಕಾರಗೊಳ್ಳುವುದು ವಿಳಂಬವಾಗಬಹುದು. ಆದ್ದರಿಂದ ಸ್ಥಳೀಯವಾಗಿ ಲಭ್ಯವಿರುವ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು ಎಂದರು.

ಪಟ್ಟಣದಲ್ಲಿರುವ 100ಕ್ಕೂ ಹೆಚ್ಚು ಬೋರ್‌ವೆಲ್, ಯಂತ್ರೋಪಕರಣಗಳನ್ನು ದುರಸ್ತಿ ಮಾಡಿಸಿ, ಜಲಾಗಾರಗಳಿಗೆ ಸಂಪರ್ಕ ಕಲ್ಪಿಸಿ ಆ ಮೂಲಕ ನೀರು ಸರಬರಾಜು ಮಾಡಬೇಕು. ಆಯಾ ವಾರ್ಡ್‌ಗಳ ಸದಸ್ಯರೊಂದಿಗೆ ಚರ್ಚಿಸಿ ಸಲಹೆ-ಸೂಚನೆ ಸ್ವೀಕರಿಸಬೇಕು. ಮುಕ್ತಿಮಂದಿರ ರಸ್ತೆಯಲ್ಲಿ ನಾಲ್ಕೈದು ವರ್ಷಗಳಿಂದ ನಿರ್ಮಿಸಿರುವ ಜಲಾಗಾರಕ್ಕೆ ಇದುವರೆಗೂ ನೀರೇ ಹರಿದಿಲ್ಲ. ಇಂತಹ ಹಲವು ಜಲಾಗಾರಗಳು ಪಟ್ಟಣದಲ್ಲಿ ಹತ್ತಾರು ವರ್ಷಗಳ ಹಿಂದೆಯೇ ನಿರ್ಮಾಣಗೊಂಡು ನೀರಿಲ್ಲದೇ ಹಾಳಾಗುತ್ತಿವೆ. ನೀರು ಸರಬರಾಜಿಗಾಗಿ ಪುರಸಭೆಯಿಂದ ಸಾಕಷ್ಟು ಹಣ ಖರ್ಚಾಗುತ್ತಿದ್ದರೂ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಪುಲಿಕೇಶ ಉಪನಾಳ, ನೀಲಪ್ಪ ಹತ್ತಿ, ಸತೀಶ ಕಾಡಣ್ಣವರ, ಮುಖ್ಯಾಧಿಕಾರಿ ಮಹೇಶ ಹಡಪದ, ಮಂಜುನಾಥ ಮುದಗಲ್, ಹನಮಂತಪ್ಪ ನಂದೆಣ್ಣವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net