

ಬೇಲೂರು: ಇತ್ತೀಚಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದನ್ನು ನಿವಾರಿಸುವುದಕ್ಕಾಗಿ ಹೆಚ್ಚಿನ ಹಣ ಮೀಸಲಿಟ್ಟು ನೀರು ಕೊಡಲು ಕ್ರಮ ಕೈಗೊಳ್ಳಿ ಎಂದು ಪುರಸಭೆ ಸದಸ್ಯ ಶಾಂತಕುಮಾರ್ ತಿಳಿಸಿದರು.
ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆ ಪ್ರಾರಂಭದಲ್ಲೇ ನೀರಿನ ಸಮಸ್ಯೆ ಕಾಡುತ್ತಿದೆ. ನೀರು ಸರಬರಾಜು ಮಾಡುವವರ ಜತೆಗೆ ಜನರು ಜಗಳವಾಡುತಿದ್ದಾರೆ. ಆದ್ದರಿಂದ ಎಲ್ಲ ಸಿಬ್ಬಂದಿ ಎಚ್ಚರ ವಹಿಸಿ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಜನರು ನಮ್ಮನ್ನು ಸೇರಿದಂತೆ ಅಧಿಕಾರಿಗಳ ವಿರುದ್ಧ ತಿರುಗಿ ಬೀಳುತ್ತಾರೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನೀರಿನ ಟ್ಯಾಂಕ್ ಹಾಗೂ ತುರ್ತು ಸಂದಭಕ್ಕಾಗಿ ಪೈಪ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಿದೆ. ಈಗಾಗಲೇ ಬೇಲೂರು ಪಟ್ಟಣದ ಜನತೆಗೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆದ್ದರಿಂದ ಪುರಸಭೆಯಿಂದ ಎಲ್ಲ ಸಿದ್ಧತೆ ಕೈಗೊಳ್ಳಬೇಕಿದೆ. ಜತೆಗೆ ಪಟ್ಟಣದಲ್ಲಿ ಕುಡಿಯುವ ನೀರನ್ನು ಯಥೇಚ್ಛವಾಗಿ ಪೋಲಾಗುತ್ತಿದೆ. ಈ ಪೋಲಾಗುತ್ತಿರುವ ನೀರನ್ನು ಉಳಿಸಲು ಸಿಬ್ಬಂದಿ ಕ್ರಮಕ್ಕೆ ಮುಂದಾಗ ಬೇಕಿದೆ ಎಂದರು.
ಅಲ್ಲದೆ ಕಳೆದ ಮೂರು ದಿನಗಳಿಂದ ವಿದ್ಯುತ್ ತೆಗೆಯುತ್ತಿರುವುದರಿಂದ ಮೂರು ದಿನಗಳಿಂದಲೂ ನೀರಿಗೆ ಸಮಸ್ಯೆಯಾಗಿದೆ. ಆದ್ದರಿಂದ 23ನೇ ವಾರ್ಡಿನ ಜನರಿಗೆ ಕುಡಿಯುವ ನೀರು ಕೊಡುವುದಕ್ಕಾಗಿ ಕ್ರಿಯಾ ಯೋಜನೆ ಮಾಡಿಕೊಂಡು ಸಿದ್ಧತೆ ಕೈಗೊಳ್ಳಬೇಕಿದೆ. ಹಾಗೂ ಯಗಚಿ ಜಲಾಶಯದಿಂದ ನೀರನ್ನು ತೆಗೆದುಕೊಂಡು ಇದರ ಸದೂಪಯೋಗ ಪಡಿಸಿಕೊಳ್ಳಬೇಕಿದೆ. ಇದರೊಂದಿಗೆ ಎಲ್ಲೆಲ್ಲಿ ನೀರಿನ ಪೈಪ್‌ಗಳ ಸಮಸ್ಯೆ ಇದೆಯೋ ಅಲ್ಲಿ ತಕ್ಷಣ ಕೆಲಸ ಮಾಡಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಇದನ್ನು ನಿರ್ಲಕ್ಷಿಸಿದರೆ ಜನರು ಅಧಿಕಾರಿಗಳು ಸೇರಿದಂತೆ ನಮ್ಮನ್ನೂ ಬೈಯ್ಯುತ್ತಾರೆ. ಆದ್ದರಿಂದ ತುರ್ತು ಸಮಸ್ಯೆಗಳನ್ನು ಬೇಗ ನಿವಾರಿಸಿದರೆ ಪುರಸಭೆಗೆ ಉತ್ತಮ ಹೆಸರು ಬರುತ್ತದೆ ಎಂದರು.
ಜಗದೀಶ್ ಮಾತನಾಡಿ, ಈ ಹಿಂದೆಯೇ ಅಂಬೇಡ್ಕರ್ ಭವನದ ಸಮೀಪವಿರುವ ಕೋಳಿ ಅಂಗಡಿಗಳ ತೆರವಿಗೆ ಸಭೆಯಲ್ಲಿ ಅನುಮೋದನೆ ದೊರೆತ್ತಿದ್ದರೂ ಅಂಗಡಿಗಳನ್ನು ತೆರವು ಮಾಡದೆ ಅವರಿಗೆ ಮತ್ತೆ ಅಗ್ರಿಮೆಂಟ್ ಮಾಡಲು ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಅಲ್ಲಿ ಕೋಳಿ ಅಂಗಡಿ ವ್ಯಾಪಾರಕ್ಕೆ ಅವಕಾಶ ಕೊಡದೆ ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಮಾತನಾಡಿ, ಈಗಿನ ಸಂದರ್ಭದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಿಸಲಾಗುವುದು. ಅಲ್ಲದೆ ಸಾರ್ವಜನಿಕರೂ ನೀರು ಪೋಲಾಗದಂತೆ ನಲ್ಲಿಗಳಿಗೆ ಟ್ಯಾಪ್‌ಗಳನ್ನು ಅಳವಡಿಸಿಕೊಂಡು ನೀರನ್ನು ಉಳಿಸಿ ಬಳಸುವ ಕೆಲಸ ಮಾಡಬೇಕಿದೆ. ನಮ್ಮ ಸಿಬ್ಬಂದಿ ನೀರು ಎಲ್ಲಿಯೂ ಪೋಲಾಗದಂತೆ ಎಚ್ಚರ ವಹಿಸಬೇಕು. ಇದರೊಂದಿಗೆ ಪಟ್ಟಣದ ಜನರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕೋಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ಎಸ್ಸಿ-ಎಸ್ಟಿ ಹಿತರಕ್ಷಣಾ ಸಭೆಯಲ್ಲಿ ದಲಿತ ಮುಖಂಡರು ಹಾಗೂ ಶಾಸಕ ಎಚ್.ಕೆ.ಸುರೇಶ್ ಒತ್ತಾಯಿಸಿದ್ದಾರೆ. ನಾವು ಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ತೆರವು ಮಾಡುತ್ತೇವೆ ಎಂದಿದ್ದೇವೆ ಅದರಂತೆ ನಡೆದುಕೊಳ್ಳುತ್ತೇವೆ ಎಂದರು.
ಮುಖ್ಯಾಧಿಕಾರಿ ಇಂದೂ ಮಾತನಾಡಿ, ಕುಡಿಯುವ ನೀರಿಗೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿಯಲು ಖುದ್ದಾಗಿ ಭೇಟಿ ನೀಡಿ ಕೆಲಸ ಮಾಡಿಸಲಾಗುವುದು. ವಾರ್ಡ್‌ಗಳಲ್ಲಿ ಏನಾದರೂ ಸಮಸ್ಯೆಯಾದರೆ ಸದಸ್ಯರು ಗಮನಕ್ಕೆ ತಂದರೆ ಕೆಲಸ ಮಾಡಿಸಲಾಗುವುದು ಎಂದರು.
ಬಿ.ಗಿರೀಶ್ ಮಾತನಾಡಿ, ಹೊಳೆ ಬೀದಿಯಲ್ಲಿ ಒಳಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ವಿದ್ಯಾರ್ಥಿಗಳು ಇದನ್ನು ತುಳಿದುಕೊಂಡೇ ಹೋಗುವಂತಾಗಿದೆ. ದುರಸ್ತಿ ಮಾಡಿಸಿ ಎಂದರೆ ಸಿಬ್ಬಂದಿ ಮಾತು ಕೇಳುತ್ತಿಲ್ಲ. ತುರ್ತಾಗಿ ಕೆಲಸ ಮಾಡಿಸಿದರೆ ಅನುಕೂಲವಾಗುತ್ತದೆ ಎಂದರು.
ಸದಸ್ಯ ಫಯಾಜ್ ಮಾತನಾಡಿ, 13ನೇ ವಾರ್ಡಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಜತೆಗೆ ಜನರು ವಾಸಿಸುವ ಸ್ಥಳದಲ್ಲಿ ವಿದ್ಯುತ್ ಕಂಬದಲ್ಲಿನ ತಂತಿಗಳು ಕೈಗೆಟುವವಂತಿದ್ದು ಅದರ ದುರಸ್ತಿಗೆ ಮುಂದಾಗಬೇಕಿದೆ ಎಂದರು.