

ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಬೆಳಗ್ಗೆ ಸಾಮಾನ್ಯ ಸಭೆ ಜರುಗಿತು.
ಹಿಂದಿನ ಮೂರು ವರ್ಷಗಳ ಜಮಾ ಖರ್ಚುಗಳ ಕುರಿತು ಚರ್ಚೆ ನಡೆಯಿತು. ಸದಸ್ಯರಾದ ಕಾಸು ಜಮಾದಾರ, ಬಶೀರ್ ಅಹ್ಮದ್ ಬೇಪಾರಿ, ಉಮೇಶ ರೂಗಿ ಮಾತನಾಡಿ, ಪ್ರತಿ ತಿಂಗಳ ಖರ್ಚು ವೆಚ್ಚಗಳ ಪೂರ್ಣ ಮಾಹಿತಿ ನೀಡಲು ಆಗ್ರಹಿಸಿದರು. ನಂತರ ಗ್ರಾಮಠಾಣ ಗಣಕೀಕೃತ ಉತಾರೆಗಳ ಪೂರೈಸುವ ಕುರಿತು ಚರ್ಚೆ ನಡೆಸಿ ಸಿಮೆಂಟ್ ಕಟ್ಟಡದ ಮನೆ, ಪತ್ರಾಸ್, ಮಣ್ಣಿನ ಮನೆಗಳಿಗೆ ಹಾಗೂ ವಾಣಿಜ್ಯ ಜಾಗಗಳಿಗೆ ನಿಗದಿತ ದರ ನಿಗದಿ ಪಡಿಸಲು ಸದಸ್ಯರು ಆಗ್ರಹಿಸಿದರು.
ವಿವಿಧ ವಾರ್ಡ್‌ಗಳಲ್ಲಿ ಇರುವ ಖಾಲಿ ಜಾಗ ಹಾಗೂ ಉದ್ಯಾನವನಗಳಿಗೆ ತಂತಿ ಬೇಲಿ ನಿರ್ಮಿಸುವ ಕುರಿತು ಹಾಗೂ 133 ನೋಂದಾಯಿತ ಬಡಾವಣೆಗಳಲ್ಲಿ ವಿದ್ಯುತ್, ನೀರು ಸೌಲಭ್ಯಗಳಿದ್ದಲ್ಲಿ ಮಾತ್ರ ಕಟ್ಟಡ ನಿರ್ಮಾಣ ಅನುಮತಿ ನೀಡಲು ಸದಸ್ಯರು ಸೂಚಿಸಿದರು.
ಸದಸ್ಯರ ಗಮನಕ್ಕೆ ತರದೆ ಸರ್ವೇ ನಂ 56/3 ಜಮೀನಿನನ್ನು 65 ಲಕ್ಷ ನೀಡಿ ಖರೀದಿಸಿ ಅದನ್ನು ಪಂಚಾಯಿತಿ ಹೆಸರಿಗೆ ನೋಂದಾಯಿಸದೆ ಇರುವ ಬಗ್ಗೆ ಚರ್ಚೆ ನಡೆಸಿ ನೋಂದಣಿಗೆ ಸೂಚಿಸಲಾಯಿತು. ಜತೆಗೆ ಪಟ್ಟಣ ವ್ಯಾಪ್ತಿಯಲ್ಲಿ ನೂತನ ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಸಭೆಯ ಸಮ್ಮತಿ ಪಡೆಯಲು ತಿಳಿಸಲಾಯಿತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿಗಳ ಭೂಬಾಡಿಗೆ ನಿಗದಿ ಪಡಿಸುವುದು ಹಾಗೂ ಖಾತೆ ಬದಲಾವಣೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವುದು, ಬೀದಿದೀಪಗಳ ನಿರ್ವಹಣೆ, ತ್ಯಾಜ್ಯ ವಸ್ತಗಳ ಸಂಗ್ರಹಣೆ ಹಾಗೂ ವಿಲೇವಾರಿ ಕುರಿತು ಕ್ರಮ ವಹಿಸಲು ಸೂಚಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ, ಸದಸ್ಯರಾದ ಶಾಂತಯ್ಯ ಜಡಿಮಠ, ಕಾಸುಗೌಡ ಬಿರಾದಾರ(ಜಲಕತ್ತಿ), ಮಂಗಳೇಶ ಕಡ್ಲೇವಾಡ, ಕಾಶೀನಾಥ ಬಜಂತ್ರಿ, ಸುಮಂಗಲಾ ಸೇಬೆನವರ, ನಾಮ ನಿರ್ದೇಶಿತ ಸದಸ್ಯರಾದ ರಾಜು ಮೆಟಗಾರ, ಹುಸೇನ್ ಕೊಕಟನೂರ, ಸುನೀಲ ಕನಮಡಿ ಇತರರಿದ್ದರು.