ಹದಗೆಟ್ಟ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಿ

mla lamani
Published on

ಶಿರಹಟ್ಟಿ: ಮಳೆಯಿಂದಾಗಿ ಕೆಸರುಗದ್ದೆಯಂತಾದ ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಸ್ತೆಯನ್ನು ಶಾಸಕ ಡಾ.ಚಂದ್ರು ಲಮಾಣಿ ಶನಿವಾರ ಪರಿಶೀಲಿಸಿದರು.

ಸಮಸ್ಯೆ ಕುರಿತು ಶಾಸಕರಿಗೆ ಮಾಹಿತಿ ನೀಡಿದ ಸ್ಥಳೀಯರಾದ ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ, ‘ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದು, ಹೆಚ್ಚಿನ ಭಾರಹೊತ್ತು ಟಿಪ್ಪರ್, ಮರಳು ತುಂಬಿದ ಲಾರಿ, ಟ್ರ್ಯಾಕ್ಟರ್‌ಗಳು ಗ್ರಾಮದ ಇದೇ ರಸ್ತೆ ಮಾರ್ಗವಾಗಿ ಓಡಾಡುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ತಗ್ಗು-ಗುಂಡಿಗಳ ಆಗರವಾಗಿದೆ. ಕಳೆದೊಂದು ವಾರದಿಂದ ಮಳೆಯ ಅವಾಂತರಕ್ಕೆ ರಸ್ತೆ ಕೆಸರುಮಯವಾಗಿ ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಸ್ಥಿತಿ ಬಂದೊದಗಿದೆ’ ಎಂದರು.

ಎಡಬ್ಲುೃ ಶ್ರೀಶೈಲ ಹೊನಕೇರಿ, ಇಂಜಿನಿಯರ್ ಮಹೇಂದ್ರಸಿಂಗ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡ ಶಾಸಕ ಲಮಾಣಿ, ಖಡಿ, ಮರಳು ತುಂಬಿದ ಭಾರಹೊತ್ತ ಟಿಪ್ಪರ್‌ಗಳ ಓಡಾಟದಿಂದ ಗ್ರಾಮದಲ್ಲಿನ ರಸ್ತೆ ಅಧೋಗತಿಗೆ ತಲುಪಿದೆ. ಸ್ಥಳೀಯರು ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಿ ಕೆಲಸಕ್ಕೆ ಅಡ್ಡಿಪಡಿಸುವ ಮೊದಲೇ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಸೂಚಿಸಿದರು. ತಿಮ್ಮರಡ್ಡಿ ಅಳವಂಡಿ, ಸಿದ್ದರಾಮಪ್ಪ ಮೊರಬದ, ಶಂಕರ ಮರಾಠೆ, ಮಹೇಶ ಬಡ್ನಿ ಇತರರಿದ್ದರು.

ರಸ್ತೆ ಅವ್ಯವಸ್ಥೆಯಿಂದಾಗಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆ ಕುರಿತು ‘ವಿಜಯವಾಣಿ’ಯಲ್ಲಿ ಭಾನುವಾರ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net