ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಕ್ರಮಕೈಗೊಳ್ಳಿ

23 SIRAGUPPA 01
ಸಿರಗುಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ವಕೀಲರ ಸಂಘ, ವಿವಿಧ ಸಂಘಟನೆಗಳು ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಸಾರ್ವಜನಿಕರು ಭಾಗವಹಿಸಿದ್ದರು.
Published on

ಸಿರಗುಪ್ಪ: ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸಾರ್ವಜನಿಕರೊಂದಿಗೆ ಸಿರಗುಪ್ಪ ನಾಗರಿಕ ಹಿತರಕ್ಷಣಾ ಸಮಿತಿ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿತು.

ಪಟ್ಟಣದ ವೈಷ್ಣವಿ ಹೋಟೆಲ್‌ನಿಂದ ದಢೇಸುಗೂರು ಬ್ರಿಡ್ಜ್‌ವರೆಗೆ ರಸ್ತೆ ಗುಂಡಿಗಳಿಂದ ಕೂಡಿದೆ. ಆದರೂ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ. ಮಳೆಯಿಂದ ಹೆಚ್ಚಿನ ಅನಾಹುತಗಳು ನಡೆಯುತ್ತಿವೆ. ಅಪಘಾತಗಳಲ್ಲಿ ಇಲ್ಲಿಯವರೆಗೆ 49 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಈ ರಾಷ್ಟ್ರೀಯ ಹೆದ್ದಾರಿ ಬೀದರ್‌ನಿಂದ ಚಾಮರಾಜನಗರದವರೆಗೆ ಸಂಪರ್ಕ ಹೊಂದಿದ್ದು, ದುರಸ್ತಿಗೆ ಕ್ರಮಕೈಗೊಳ್ಳಬೇಕು. ಪಟ್ಟಣಕ್ಕೆ ಬೇರೆ ತಾಲೂಕು, ಜಿಲ್ಲೆಯಿಂದ ಬರುವ ಜನರು ಇಲ್ಲಿನ ಧೂಳು, ಗುಂಡಿಗಳಿಂದ ಬೇಸತ್ತು ಹೋಗಿದ್ದಾರೆ. ಹೆದ್ದಾರಿ ಕಾಮಗಾರಿ ಮುಗಿಸಲು ಮೂರು ವರ್ಷವಾದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ.

ಇದರಿಂದ ಹೆದ್ದಾರಿ ಅಕ್ಕಪಕ್ಕದಲ್ಲಿ ಮನೆ ನಿವಾಸಿಗಳು ಅಂಗಡಿಗಳ ಮಾಲೀಕರು ಹಲವು ರೋಗಗಳಿಗೆ ತುತ್ತಾಗಿದ್ದಾರೆ. ಅಧಿಕ ಭಾರದ ವಾಹನಗಳು, ಬಸ್, ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಶಾಶ್ವತವಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net