

ವಿಜಯಪುರ: ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಗ್ನಲ್-ರೋಡ್ ಬ್ಯಾರಿಕೇಡ್, ಮಾಹಿತಿ ಫಲಕ, ತಿರುವು ರಸ್ತೆಗಳ ಮಾಹಿತಿ, ವೃತ್ತಗಳ ಮಾಹಿತಿ ಅಳವಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿವಳಿಕೆ ನೀಡಬೇಕು. ರಸ್ತೆಯ ಸುಧಾರಣೆ ಕೈಗೊಂಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಸೇರಿದಂತೆ ತುರ್ತು ವೈದ್ಯಕೀಯ ವ್ಯವಸ್ಥೆ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಅಪಘಾತ ಪ್ರಕರಣಗಳು ಸಂಭವಿಸಿದ ಸಂದರ್ಭದಲ್ಲಿ ಸಾವು ನೋವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಹೆದ್ದಾರಿಗಳಲ್ಲಿ ತುರ್ತು ದೂರವಾಣಿ -108, ಹೆದ್ದಾರಿ ಹೆಲ್ಪ್‌ಲೈನ್ 1033, ಟೋಲ್‌ಫ್ರೀ ಫಲಕಗಳನ್ನು ಅಳವಡಿಸಬೇಕು. ಈ ದೂರವಾಣಿಗಳಿಗೆ ಬಂದಿರುವ ಕರೆಗಳಿಗೆ ತುರ್ತಾಗಿ ಸ್ಪಂದಿಸಬೇಕು. ತುರ್ತು ಸಂದರ್ಭಗಳಲ್ಲಿ ಯಾವುದೇ ನಿರ್ಲಕ್ಷ್ಯ ತೋರದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಆದ್ಯತೆ ಮೇಲೆ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾಹಿತಿ ನೀಡಿ, ಜಿಲ್ಲಾಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಅಪಘಾತ ಪ್ರಕರಣಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದರು.
ವಿಜಯಪುರ ನಗರದ ಗಾಂಧಿವೃತ್ತದಿಂದ ಆರಂಭವಾಗುವ ರಸ್ತಗೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಸಂಚಾರ ಮಾಡದಂತೆ ಕ್ರಮ ವಹಿಸಬೇಕು. ಪಾದಚಾರಿಗಳಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಕ್ರಮ ವಹಿಸಬೇಕು. ನಗರದೊಳಗೆ ಅವಶ್ಯಕವಿದ್ದೆಡೆ ಮಾತ್ರ ರಸ್ತೆ ತಡೆ ಅಳವಡಿಕೆಗೆ ಕ್ರಮ ವಹಿಸಬೇಕು. ಹೆದ್ದಾರಿ ಪೆಟ್ರೋಲಿಂಗ್ ವಾಹನ ಹಗಲು-ರಾತ್ರಿ ಗಸ್ತು ನಡೆಸುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಶಾಲಾ ಮಕ್ಕಳು ದ್ವಿಚಕ್ರ ವಾಹನ ಬಳಕೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸೂಕ್ತ ಜಾಗೃತಿ ಮೂಡಿಸಬೇಕು. ಶಾಲೆಗಳಲ್ಲಿ ರಸ್ತೆ ಸುರಕ್ಷತಾ ಅನುಸರಿಸುವ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಶಾಲಾ ವಾಹನಗಳಿಗೆ ಅನುಮತಿ ನೀಡುವಾಗ ಸಮರ್ಪಕವಾಗಿ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕು. ಶಾಲಾ ವಾಹನಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಪರಿಶೀಲನೆ ನಡೆಸಬೇಕು.
ಅಳಗಿನಾಳದ ಹತ್ತಿರ ರಸ್ತೆಯ ಪಕ್ಕದಲ್ಲಿ ಬಾವಿ ಇದ್ದು, ರಸ್ತೆ ಪಕ್ಕದಲ್ಲಿರುವುದರಿಂದ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ಯಾವುದೇ ಅವಘಡಗಳು ಸಂಭವಿಸಿದಂತೆ ಸೂಕ್ತ ಸುರಕ್ಷತಾ ಕ್ರಮ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತ ಸ್ಥಳಗಳಲ್ಲಿ ಇಂದಿನ ಸಭೆಯಲ್ಲಿ ನೀಡಿದ ನಿರ್ದೇಶನಗಳನ್ನು ಚಾಚುತಪ್ಪದೇ ಪಾಲಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ, ಅಪಘಾತ ತಪ್ಪಿಸಿ ಅಮೂಲ್ಯ ಜೀವ ಉಳಿಸುವ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸದೇ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಹಡಗಲಿ-ದೇವರಹಿಪ್ಪರಗಿ ಮಾರ್ಗ, ವಿಜಯಪುರ ನಗರದ ಪಾಟೀಲ್ ಪ್ಲಾನೆಟ್, ಲಿಂಗದ ಗುಡಿ ರಸ್ತೆ, ವಿಜಯಪುರ- ಸೋಲಾಪುರ ಮಾರ್ಗದಲ್ಲಿನ ಹಳಗುಣಕಿ ಕ್ರಾಸ್ ಹತ್ತಿರ, ಅಗಸನಾಳ ಸೇರಿದಂತೆ ಮುಂತಾದ ಅಪಘಾತ ಸ್ಥಳಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಮದಾರ ಅವರು ಈ ಹಿಂದಿನ ಸಭೆಯ ನಿರ್ದೇಶನದಂತೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಎಎಸ್‌ಪಿ ಶಂಕರ ಮಾರಿಹಾಳ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಇಂಡಿ ಉಪ ವಿಭಾಗಾಧಿಕಾರಿ ಆಬಿದ ಗದ್ಯಾಳ ಮತ್ತಿತರರಿದ್ದರು.